ನವದೆಹಲಿ[ಆ.01]: ಪ್ರಖ್ಯಾತ ದೇಗುಲ ಶಬರಿಮಲೆಗೆ  10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರಿಂ ಕೋರ್ಟ್ ಕಾಯ್ದಿರಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರ ನ್ಯಾಯಾಪೀಠ ಒಂದು ವಾರದೊಳಗೆ ವಾದಿ ಹಾಗೂ ಪ್ರತಿವಾದಿ ಎರಡೂ ಕಡೆಯವರು ಒಂದು ವಾರದೊಳಗೆ ತಮ್ಮ ಅಭಿಪ್ರಾಯ ಹಾಗೂ ದಾಖಲೆಗಳನ್ನು  ಸಲ್ಲಿಸುವಂತೆ ತಿಳಿಸಿ ತೀರ್ಪನ್ನು ಕಾಯ್ದಿರಿಸಿದೆ.

10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನೀಡುವಂತೆ ಭಾರತೀಯ ಯುವವಕೀಲರ ಸಂಘ ಹಾಗೂ ಇತರರು ಸುಪ್ರೀಂ ಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿದ್ದರು. ದೇಗುಲಗಳಿಗೆ ನಿರ್ಬಂಧ ವಿಧಿಸಿದರೆ  ಖಾಸಗಿ ಹಕ್ಕು ಹಾಗೂ ಸಂವಿಧಾನದ ಉಲ್ಲಂಘನೆಯಾಗುತ್ತದೆ. ದೇವಸ್ಥಾನಗಳು ಎಲ್ಲರಿಗೂ ಮುಕ್ತ ಎಂದು ಸುಪ್ರಿಂ ಕೋರ್ಟ್ ಜು.18 ರಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. 

ಭಾರತದ ಯುವ ವಕೀಲರ ಸಮಿತಿ 800 ವರ್ಷಗಳ ಮಹಿಳೆಯರ ಪ್ರವೇಶ ನಿರಾಕರಣೆಯ ಸಂಪ್ರಾದಾಯದ ವಿರುದ್ಧ ಸುಪ್ರಿಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು. ಕೇರಳ ಸರ್ಕಾರ, ತಿರುವಾಂಕೂರ್ ದೇಗುಲ ಮಂಡಳಿ, ಶಬರಿಮಲ ದೇಗುಲದ ಮುಖ್ಯ ಅರ್ಚಕರು, ಪತಾನಮ್ತಿಟ್ಟದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು 10 ವರ್ಷದಿಂದ 50 ವರ್ಷದ ಮಹಿಳೆಯರು ದೇಗುಲ ಪ್ರವೇಶಿಸಬಾರದು ಎಂದು ಅರ್ಜಿಯಲ್ಲಿ ಪ್ರತಿವಾದಿಗಳಾಗಿದ್ದರು. ಆರ್.ಎಫ್. ನಾರಿಮನ್, ಎ.ಎಂ. ಕಾನ್ವಲಿಕರ್,ಡಿ.ವೈ.ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರ ಪೀಠದಲ್ಲಿರುವ ನ್ಯಾಯಾಧೀಶರು.