ವರದಕ್ಷಿಣೆ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ದೂರು ನೀಡಿದಾಕ್ಷಣ ಬಂಧಿಸುವ ಕಾನೂನು ರದ್ದಿಗೆ ಸುಪ್ರೀಂ ಕಳೆದ ಜುಲೈನಲ್ಲಿ ಆದೇಶಿಸಿತ್ತು
ನವದೆಹಲಿ(ಅ.15): ಯಾವುದೇ ಮಹಿಳೆ ವರದಕ್ಷಿಣೆ ಕಿರುಕುಳ ಆರೋಪದ ದೂರು ನೀಡಿದಾಕ್ಷಣ ಆಕೆಯ ಪತಿ ಹಾಗೂ ಬಂಧುಗಳನ್ನು ಬಂಧಿಸಬಾರದು ಎಂದು ಮೂರು ತಿಂಗಳ ಹಿಂದೆ ತಾನೇ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂಕೋರ್ಟ್ ಮುಂದಾಗಿದೆ.
ಈ ತೀರ್ಪಿನಿಂದಾಗಿ ವರದಕ್ಷಿಣೆ ಕಿರುಕುಳ ನಿಗ್ರಹ ಕಾಯ್ದೆ ದುರ್ಬಲಗೊಂಡಂತಾಗಿದೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠ, ಈ ಹಿಂದಿನ ತೀರ್ಪಿಗೆ ತಮ್ಮ ಸಹಮತವಿಲ್ಲ ಎಂದು ಹೇಳಿದೆ.
‘ಈ ತೀರ್ಪು ಮಹಿಳಾ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂಬುದು ನಮ್ಮ ಭಾವನೆ. ಮಹಿಳಾ ಹಕ್ಕುಗಳ ಮೇಲೆ ಪರಿಣಾಮ ಬೀರುವ ಅಭಿಪ್ರಾಯಗಳಿಗೆ ನಮ್ಮ ಸಹಮವಿಲ್ಲ. ನಾವು ಕಾನೂನು ರಚಿಸಲು ಆಗದು. ಆದರೆ ಕಾನೂನು ವ್ಯಾಖ್ಯಾನಿಸಬಹುದು’ ಎಂದು ಪೀಠ ಹೇಳಿತು. ವರದಕ್ಷಿಣೆ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ದೂರು ನೀಡಿದಾಕ್ಷಣ ಬಂಧಿಸುವ ಕಾನೂನು ರದ್ದಿಗೆ ಸುಪ್ರೀಂ ಕಳೆದ ಜುಲೈನಲ್ಲಿ ಆದೇಶಿಸಿತ್ತು
