ನವದೆಹಲಿ(ಸೆ.27): ಬುಲಂದ್‌ಶಹರ್‌ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆಗೆ ಖುದ್ದು ಹಾಜರಾಗದ ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶ ಸಚಿವ ಅಜಂ ಖಾನ್‌ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಧಾನ ವ್ಯಕ್ತಪಡಿಸಿದೆ.

ಖಾನ್‌ಗೆ ಹೊಸ ನೋಟಿಸ್‌ ನೀಡುವಂತೆ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಖಾನ್‌ ಸಚಿವರಾಗಿರುವುದರಿಂದ ಉತ್ತರ ಪ್ರದೇಶ ಸರ್ಕಾರದ ಮುಖೇನ ನೋಟಿಸ್‌ ನೀಡಬೇಕೆಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಣೀಂದರ್‌ ಸಿಂಗ್‌ ತಿಳಿಸಿದಾಗ ಕೋರ್ಟ್‌ ಈ ನಿರ್ದೇಶನ ನೀಡಿದೆ. ಬುಲಂದ್‌ಶಹರ್‌ ಪ್ರಕರಣ ‘ರಾಜಕೀಯ ಸಂಚು’ ಆಗಿರಬಹುದು ಎಂದು ಖಾನ್‌ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು.