2017ನೇ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲು ಸಿಬಿಎಸ್ಇ’ಗೆ ಇಂದು ಸುಪ್ರಿಂ ಕೋರ್ಟ್ ಅನುಮತಿ ನೀಡಿದೆ.ಮೇ.7ರಂದು ದೇಶಾದ್ಯಂತ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆದಿದ್ದು, ಸುಮಾರು 12 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.ಆದರೆ ಫಲಿತಾಂಶ ಪ್ರಕಟಕ್ಕೆ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ಮಧ್ಯಂತರ ತಡೆ ಹೇರಿತ್ತು.
ನವದೆಹಲಿ: 2017ನೇ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲು ಸಿಬಿಎಸ್ಇ’ಗೆ ಇಂದು ಸುಪ್ರಿಂ ಕೋರ್ಟ್ ಅನುಮತಿ ನೀಡಿದೆ.
ಮೇ.7ರಂದು ದೇಶಾದ್ಯಂತ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆದಿದ್ದು, ಸುಮಾರು 12 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ ಫಲಿತಾಂಶ ಪ್ರಕಟಕ್ಕೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಮಧ್ಯಂತರ ತಡೆ ಹೇರಿತ್ತು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗಾಗಿ ಮೇ 7ರಂದು ನಡೆದ ನೀಟ್ ಪರೀಕ್ಷೆ ವೇಳೆ ಹಿಂದಿ, ಆಂಗ್ಲ ಮತ್ತು ತಮಿಳು ಭಾಷೆ ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳಲ್ಲಿ ಒಂದೇ ರೀತಿಯ ಪ್ರಶ್ನೆಗಳಿರಲಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ನೀಟ್ ಫಲಿತಾಂಶ ಘೋಷಣೆ ಮಾಡದಂತೆ ಸಿಬಿಎಸ್ಇಗೆ ಹೈಕೋರ್ಟ್ ತಡೆ ಹೇರಿತ್ತು.
ನೀಟ್ ಪರೀಕ್ಷೆಗೆ ಸಂಬಂಧಿಸಿ ಅಂತಿಮ ಆದೇಶ ನೀಡುವವರೆಗೂ ಅಂದರೆ ಜೂ.8ರವರೆಗೂ ಯಾವುದೇ ಕಾರಣಕ್ಕೂ ಫಲಿತಾಂಶ ಪ್ರಕಟಿಸದಂತೆ ಸಿಬಿಎಸ್ಇಗೆ ಹೈಕೋರ್ಟ್ ಸೂಚನೆ ನೀಡಿತ್ತು.
ಈ ಕುರಿತು ಮೇ 22ರಂದು ವಿಚಾರಣೆ ನಡೆಸಿದ್ದ ನ್ಯಾ.ಆರ್.ಮಹದೇವನ್ ನೇತೃತ್ವದ ರಜೆ ಪೀಠ, ವೈದ್ಯಕೀಯ ಸೀಟಿಗಾಗಿ ಪ್ರವೇಶಾತಿ ಪರೀಕ್ಷೆ ವೇಳೆ ಸಮಾನತೆ ಕುರಿತು ಸಾರುವ ಸಂವಿಧಾನದ 14ನೇ ವಿಧಿಯನ್ನು ಪರೀಕ್ಷೆ ವೇಳೆ ಉಲ್ಲಂಘಿಸಲಾಗಿದೆ ಎಂಬ ವಿದ್ಯಾರ್ಥಿಯೊಬ್ಬರ ತಾಯಿ ಸಲ್ಲಿಸಿರುವ ಅರ್ಜಿ ಕುರಿತು ಸಿಬಿಎಸ್ಇ ತನ್ನ ನಿಲುವು ತಿಳಿಸುವಂತೆ ಕೋರಿತ್ತು.
