ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದ ನೂತನ ಪರಿಷ್ಕರಣೆಯ ದರಗಳು ಇಂದಿನಿಂದ ಆರಂಭಗೊಂಡಿವೆ. ಯಾವುದಕ್ಕೆ ಎಷ್ಟೆಷ್ಟು ದರಗಳು ಅನ್ವಯಿಸುತ್ತವೆ ಇಲ್ಲಿದೆ ಮಾಹಿತಿ

ಮುಂಬೈ(ಜೂ.01): ಭಾರತದ ಸಾರ್ವಜನಿಕ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದ ನೂತನ ಪರಿಷ್ಕರಣೆಯ ದರಗಳು ಇಂದಿನಿಂದ ಆರಂಭಗೊಂಡಿವೆ. ಯಾವುದಕ್ಕೆ ಎಷ್ಟೆಷ್ಟು ದರಗಳು ಅನ್ವಯಿಸುತ್ತವೆ ಇಲ್ಲಿದೆ ಮಾಹಿತಿ

1) ಉಳಿತಾಯ ಖಾತೆ ಹೊಂದಿರುವವರಿಗೆ 8 ಬಾರಿ ಉಚಿತ ಎಟಿಎಂ ವಹಿವಾಟು ಇರಲಿದ್ದು, ಇದರಲ್ಲಿ 5 ಎಸ್'ಬಿಐ ಎಟಿಎಂಗಳು ಹಾಗೂ 3 ಇತರ ಎಟಿಎಂ ಒಳಗೊಂಡಿರುತ್ತದೆ. ಇದು ಮೆಟ್ರೋ ಪಟ್ಟಣಗಳಿಗೆ ಅನ್ವಯವಾಗಲಿದ್ದು, ಮೆಟ್ರೋ'ಯೇತರ ಪಟ್ಟಣ'ಗಳ ಎಟಿಎಂ'ಗಳಲ್ಲಿ 10 ಬಾರಿ ಉಚಿತ ವಹಿವಾಟಿನ ಅವಕಾಶವಿದೆ.

2) ನೂತನ ಎಟಿಎಂ ಕಾರ್ಡು ಪಡೆಯುವವರಲ್ಲಿ 'ರೂಪೇ ಕ್ಲಾಸಿಕ್' ಕಾರ್ಡ್'ಅನ್ನು ಮಾತ್ರ ಉಚಿತವಾಗಿ ಪಡೆಯುವ ಅವಕಾಶವಿದೆ. ಉಳಿದವನ್ನು ಪಡೆಯಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ.

3) ಉಳಿತಾಯ ಖಾತೆಯಲ್ಲಿ ಚೆಕ್ ಬುಕ್ ಪಡೆಯಲು 3 ರೀತಿಯ ಶುಲ್ಕ ಪಾವತಿಸಬೇಕಿದೆ. 10 ಹಾಳೆಗಾಗಿ ರೂ. 30, 25 ಹಾಳೆಗೆ 75 ರೂ ಹಾಗೂ 50 ಹಾಳೆಯಿರುವ ಚೆಕ್'ಬುಕ್'ಗೆ 150 ರೂ. ಪಾವತಿಸಬೇಕಿದೆ.

4) ಯುಪಿಐ ಹಾಗೂ ಇತರ ಡಿಜಿಟಲ್ ವಹಿವಾಟಿನ ಮೂಲಕ ಐಎಂಪಿಎಸ್(ತಕ್ಷಣ ಪಾವತಿ ಸೇವೆ) ಹಣ ವರ್ಗಾವಣೆಗೆ ವಿವಿಧ ರೀತಿಯ ಶುಲ್ಕವಿರುತ್ತದೆ. 1 ಲಕ್ಷದವರೆಗೂ 5 ರೂ, 1ರಿಂದ 2 ಲಕ್ಷದ ವರೆಗೂ 15 ರೂ. ಹಾಗೂ 2 ಲಕ್ಷದಿಂದ 5 ಲಕ್ಷದವರೆಗೆ 25 ರೂ. ಮೊತ್ತ ಪಾವತಿಸಬೇಕು. ಈ ಶುಲ್ಕಗಳು ಸೇವಾ ತೆರಿಗೆಯನ್ನು ಹೊರತುಪಡಿಸುತ್ತವೆ.

5) ಕೊಳೆಯಾದ ಹಾಗೂ ಹರಿದ ನೋಟುಗಳಿಗೂ ಶುಲ್ಕ ಅನ್ವಯವಾಗಲಿವೆ. 5 ಸಾವಿರ ಮೌಲ್ಯದ 20 ನೋಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.5 ಸಾವಿರದವರೆಗೆ 20ಕ್ಕೂ ಹೆಚ್ಚು ನೋಟುಗಳಿದ್ದರೆ ಪ್ರತಿ ನೋಟಿಗೂ 2 ರೂ. ದರ ವಿಧಿಸಲಾಗುತ್ತದೆ.