Asianet Suvarna News Asianet Suvarna News

ಎಟಿಎಂನಲ್ಲಿ ಖೋಟಾ ನೋಟು ಸಾಧ್ಯವಿಲ್ಲ: ಎಸ್'ಬಿಐ

ಖೋಟಾ ನೋಟು ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಹೊರತು, ಗ್ರಾಹಕ ಬ್ಯಾಂಕನ್ನು ಸಂಪರ್ಕಿಸಿಲ್ಲವೆಂದು ಬ್ಯಾಂಕ್ ಹೇಳಿದೆ. ಈ ಕೃತ್ಯದ ಹಿಂದೆ ಕಿಡಿಗೇಡಿಗಳ ಕೈವಾಡವಿರಬಹುದು ಎಂಬ ಶಂಕೆಯನ್ನು ಬ್ಯಾಂಕ್ ವ್ಯಕ್ತಪಡಿಸಿದೆ.

SBI Moves to Resolve Fake Currency Note Case

ನವದೆಹಲಿ(ಫೆ.22): ದೆಹಲಿಯ ಎಟಿಎಂ ಯಂತ್ರದಲ್ಲಿ ಖೋಟಾನೋಟು ಬಂದಿದೆಯೆಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ.

ಬ್ಯಾಂಕ್’ಗೆ ಬರುವ ಹಾಗೂ ಬ್ಯಾಂಕಿನಿಂದ ನೀಡಲ್ಪಡುವ ಪ್ರತಿಯೊಂದು ನೋಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅತ್ಯಾಧುನಿಕ ವ್ಯವಸ್ಥೆ ಇದೆ. ಆದುದರಿಂದ ಎಟಿಎಂ ಯಂತ್ರದಲ್ಲಿ ಖೋಟಾ ನೋಟು ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಎಸ್’ಬಿಐ ಹೇಳಿದೆ.

ಖೋಟಾ ನೋಟು ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಹೊರತು, ಗ್ರಾಹಕ ಬ್ಯಾಂಕನ್ನು ಸಂಪರ್ಕಿಸಿಲ್ಲವೆಂದು ಬ್ಯಾಂಕ್ ಹೇಳಿದೆ. ಈ ಕೃತ್ಯದ ಹಿಂದೆ ಕಿಡಿಗೇಡಿಗಳ ಕೈವಾಡವಿರಬಹುದು ಎಂಬ ಶಂಕೆಯನ್ನು ಬ್ಯಾಂಕ್ ವ್ಯಕ್ತಪಡಿಸಿದೆ.

ದೆಹಲಿಯ ಸಂಗಮ್ ವಿಹಾರ್’ನಲ್ಲಿರುವ ಎಸ್’ಬಿಐ ಎಟಿಎಂವೊಂದರಲ್ಲಿ ಗ್ರಾಹಕನಿಗೆ 2000 ರೂ.ನ ನಕಲಿ ನೋಟುಗಳು ಬಂದಿದ್ದು, ಪೊಲೀಸರ ಪರಿಶೀಲನೆಯಲ್ಲಿ ಖಾತ್ರಿಪಟ್ಟಿದೆಯೆಂದು ವರದಿಯಾಗಿದೆ. ಪೊಲೀಸರು ಎಟಿಎಮ್’ಅನ್ನು ತಮ್ ವಶಕ್ಕೆ ಪಡೆದಿದ್ದು ಸಿಸಿಟಿವಿ ದೃಶ್ಯಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ನೋಟುಗಳನ್ನು ಯಾರೋ ಕಿಡಿಗೇಡಿಗಳು ಮುದ್ರಿಸಿದ್ದು, ಅದರ ಮೇಲೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂಬುದರ ಬದಲು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿದೆ. ಅಲ್ಲದೆ, ‘ಗ್ಯಾರಂಟೀಡ್ ಬೈ ಇಂಡಿಯನ್ ಗವರ್ನ್‌ಮೆಂಟ್’ ಎಂಬುದರ ಬದಲು ‘ಗ್ಯಾರಂಟೀಡ್ ಬೈ ಚಿಲ್ಡ್ರನ್ಸ್ ಗವರ್ನ್‌ಮೆಂಟ್’ ಎಂದೂ ಬರೆಯಲಾಗಿದೆ. ಅಲ್ಲದೆ, ಮೂಲ ನೋಟಿನಲ್ಲಿರುವ ಅಂಶಗಳೂ, ಇದರಲ್ಲಿರುವ ಅಂಶಗಳೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಗುತ್ತದೆ.

Follow Us:
Download App:
  • android
  • ios