ಬೆಂಗಳೂರು [ಸೆ.23]: ‘ಸುವರ್ಣ ನ್ಯೂಸ್’ ಮತ್ತು‘ಕನ್ನಡಪ್ರಭ’ ವತಿ ಯಿಂದ ಹಮ್ಮಿಕೊಂಡಿರುವ ಮೂರನೇ ಆವೃತ್ತಿಯ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಹೊರತಂದಿರುವ ‘ಇಂದು ಸಾಧ್ಯ, ಮುಂದೆ ಅಸಾಧ್ಯ, ವನ್ಯಜೀವಿ ಸಂರಕ್ಷಿಸಿ’ ಪೋಸ್ಟರ್ ಲೋಕಾರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. 

ಬಳಿಕ ಮಾತನಾಡಿದ ಅವರು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಾದರೆ ಮಾತ್ರ ನಮ್ಮ ನಾಡು, ನಮ್ಮ ದೇಶ ಸುಭಿಕ್ಷವಾಗಿರಲಿದ್ದು, ನಾಡಿನ ಜೀವನದಿಗಳು ತುಂಬಿ ಹರಿಯಲು ಸಾಧ್ಯ. ಇಡೀ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಪೋಷಣೆ ಮಾಡುತ್ತಿರುವ ಎರಡನೇ ಹಾಗೂ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಹೆಮ್ಮೆಯ ವಿಷಯವಾಗಿದ್ದು, ನಿಸರ್ಗ ಸಂಪತ್ತನ್ನು ನಾವೆಲ್ಲ ಸಂರಕ್ಷಣೆ ಮಾಡಬೇಕಿದೆ ಎಂದರು.

ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳ ಅಡಿಯಲ್ಲಿ ಕರ್ನಾಟಕದ ಪ್ರಭಾವಿ ಹಾಗೂ ಜವಾಬ್ದಾರಿಯುತ ಮಾಧ್ಯಮ ಸಂಸ್ಥೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಕಳೆದ ಎರಡು ವರ್ಷಗಳಿಂದ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ನಿರತವಾಗಿರುವುದು ಸ್ವಾಗತಾರ್ಹ. ಈ ಅಭಿಯಾನದ ಮೂಲಕ ನಾವೆಲ್ಲ ಕನ್ನಡ ನಾಡಿನ ನಿಸರ್ಗ ಸಂಪತ್ತನ್ನು ಉಳಿಸುವ ಪಣ ತೊಡಬೇಕಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ನಮ್ಮ ಮಕ್ಕೃಳಲ್ಲಿ ಪರಿಸರ ಸಂರಕ್ಷಣೆಯ ಬೀಜ ಬಿತ್ತುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ಕರ್ನಾಟಕದ ಐದು ಹುಲಿ ಸಂರಕ್ಷಣಾ ಪ್ರದೇಶಗಳು ಹಾಗೂ ಎರಡು ವನ್ಯಜೀವಿ ಧಾಮಗಳಲ್ಲಿ ನಡೆಯಲಿರುವ ಈ ಅಭಿಯಾನಕ್ಕೆ ಕನ್ನಡದ ಯುವ ನಾಯಕ ನಟ ಶ್ರೀಮುರಳಿ ರಾಯಭಾರಿಯಾಗಿರುವುದು ಶ್ಲಾಘನೀಯ. ಅಭಿಯಾನದ ಅಂಗವಾಗಿ ಕನ್ನಡ ಚಿತ್ರರಂಗದ ತಾರಾಬಳಗ, ನಟ ನಟಿಯರು ಹಾಗೂ ಕಲಾವಿದರು ಅರಣ್ಯ ಪ್ರದೇಶ ಹಾಗೂ ಕಾಡಂಚಿನ ಗ್ರಾಮಗಳಿಗೆ ಭೇಟಿ ಕೊಟ್ಟು ಜನ ಜಾಗೃತಿ ಮೂಡಿಸುವ ಕೆಲಸ ಮಾಡುವುದರಿಂದ ವನ್ಯಜೀವಿ ಸಂಪತ್ತು ಉಳಿಯಲು ಸಾಧ್ಯ ಎಂದು ಮುಖ್ಯಮಂತ್ರಿ ಹೇಳಿದರು. 

‘ಕನ್ನಡಪ್ರಭ’ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಮಾಧ್ಯಮಗಳು ಕೇವಲ ಸುದ್ದಿಯನ್ನು ಮಾತ್ರ ಬಿತ್ತರಿಸುವುದಲ್ಲದೆ ಸಾಮಾಜಿಕ ಕಳಕಳಿಯ ಜೊತೆಗೆ ನಾಡಿನ ಜೀವ ಸಂಕುಲ ಉಳಿಸಬೇಕು ಎಂಬ ಕಾರಣದಿಂದ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ಕ್ಕೆ ಮುಂದಾಗಿದ್ದೇವೆ. ಆ ಮೂಲಕ ರಾಜ್ಯದಲ್ಲಿ ವನ್ಯಜೀವಿ ಸಂಪತ್ತು ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ ಎಂದರು. 

ವನ್ಯ ಜೀವಿಗಳು ಆಹಾರವನ್ನರಿಸಿ ಕಾಡಂಚಿನ ಗ್ರಾಮಗಳಿಗೆ ಬರುತ್ತವೆ. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಜಾನುವಾರುಗಳು ಮತ್ತು ಬೆಳೆ ನಷ್ಟವಾಗಿದೆ ಎಂದು ಕುಪಿತಗೊಂಡು ವನ್ಯಜೀವಿಗಳ ಜೀವ ತೆಗೆಯುತ್ತಾರೆ. ಅದನ್ನು ತಡೆದು ಅವರಲ್ಲಿ ಜಾಗೃತಿ ಮೂಡಿಸಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತಡೆಯಲು ಈ ಅಭಿಯಾನದ ಮೂಲಕ ಶ್ರಮಿಸಲಾಗುವುದು. ಜೊತೆಗೆ ಅರಣ್ಯ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾನವ ಪ್ರಾಣಿ-ಸಂಘರ್ಷ ಕಡಿಮೆಯಾಗುತ್ತಿದೆ. ಈ ಜಾಗೃತಿಯನ್ನು ಹೆಚ್ಚಳ ಮಾಡುವ ಸಲುವಾಗಿ ಅಭಿಯಾನ ಮುಂದುವರೆಸುತ್ತಿದ್ದೇವೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. 

ಕಳೆದ ಅವಧಿಯಲ್ಲಿ ನಡೆದಿದ್ದ ಅಭಿಯಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೂ ಪೊಲೀಸ್ ಸಿಬ್ಬಂದಿಯಂತೆ ಸೇವೆ ಸಲ್ಲಿಸುತ್ತಿರುವ ಅಂಶ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ನೀಡುತ್ತಿರುವ ಮುಖ್ಯಮಂತ್ರಿಗಳ ಪದಕ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಮನವಿಗೆ ಸಮ್ಮತಿಸಿದ್ದ ಹಿಂದಿನ ಮುಖ್ಯಮಂತ್ರಿಗಳು ಆದೇಶ ನೀಡಿದ್ದರು. ಆದರೆ, ಈವರೆಗೂ ವಿತರಣೆಯಾಗಿಲ್ಲ. ತಾವು ಪದಕ ವಿತರಣಾ ಕಾರ್ಯ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಈ ಅಭಿಯಾನದ ರಾಯಭಾರಿಯಾಗಿ ಯುವ ನಟ ಶ್ರೀಮರಳಿ ಆಯ್ಕೆಯಾಗಿದ್ದು, ವನ್ಯ ಸಂಪತ್ತು ರಕ್ಷಣೆ ಮಾಡು ವುದಕ್ಕೆ ಶ್ರಮಿಸಲಿದ್ದಾರೆ. ಅಲ್ಲದೆ, ನಟಿ ಮತ್ತು ನಿರ್ಮಾಪಕಿ ಶ್ರುತಿ ನಾಯ್ಡು ಸ್ವಯಂಪ್ರೇರಿತವಾಗಿ ವನ್ಯಜೀವಿ ಸಂರಕ್ಷಣೆಗೆ ಮುಂದಾಗಿದ್ದು ಸ್ವಾಗತಾರ್ಹ ಎಂದು ತಿಳಿಸಿದರು.

ಮಾಧ್ಯಮಗಳು ಸಾಮಾನ್ಯವಾಗಿ ಚರ್ಚಾಗೋಷ್ಠಿಗಳು, ರಾಜಕೀಯ ವಿಶ್ಲೇಷಣೆ ಮಾಡುವುದರಲ್ಲಿ ನಿರತವಾಗಿರುತ್ತವೆ. ಆದರೆ, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಅವುಗಳ ಜೊತೆಗೆ ಸಂಸ್ಥೆಯಿಂದ ಸಾರ್ವ ಜನಿಕರಿಗೆ ನೆರವಾಗುವಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೊಡಗುಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ಸಾಕಷ್ಟು ಸಾಮಗ್ರಿಗಳನ್ನು ಜನರಿಗೆ ತಲುಪಿಸಲಾಗಿತ್ತು. ಸರ್ಕಾರದ ಅಧಿಕಾರಿಗಳು ತಲುಪಿಸಲಾಗದಂತಹಸ್ಥಳಗಳಿಗೆ ನಮ್ಮ ಸಂಸ್ಥೆಯ ಸಿಬ್ಬಂದಿ ಅಗತ್ಯ ಸಾಮಗ್ರಿಗಳನ್ನು ತಲುಪಿಸಿದ್ದೆವು ಎಂದು ಹೇಳಿದರು.

ಅಭಿಯಾನದ ರಾಯಭಾರಿ ಶ್ರೀಮುರಳಿ, ನಟಿ, ನಿರ್ಮಾಪಕಿ ಶ್ರುತಿ ನಾಯ್ಡು, ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ಸಿಇಒ ಅಭಿನವ್ ಖರೆ, ಜಾಹಿರಾತು ವಿಭಾಗದ ಉಪಾಧ್ಯಕ್ಷ ಅನಿಲ್ ಸುರೇಂದ್ರ, ವ್ಯವಹಾರ ವಿಭಾಗದ ಮುಖ್ಯಸ್ಥ ಅಪ್ಪಚ್ಚು, ಸುವರ್ಣ ನ್ಯೂಸ್‌ನ ಕರೆಂಟ್ ಅಫೇರ್ಸ್ ಸಂಪಾದಕ ಜಯಪ್ರಕಾಶ್ ಶೆಟ್ಟಿ, ಸಹಾಯಕ ಸಂಪಾದಕ ವಿನೋದ್ ಕುಮಾರ್ ಬಿ.ನಾಯಕ್ ಸೇರಿದಂತೆ ಮತ್ತಿತರರಿದ್ದರು.