ಪತ್ರಕರ್ತನ ಹತ್ಯೆಯಿಂದ ಬಯಲಾಯ್ತು ಸೌದಿ ಯುವರಾಜನ ಮುಖವಾಡ!

ಪತ್ರಕರ್ತ ಜಮಾಲ್‌ ಖಶೋಗ್ಗಿ ಕೊಲೆ ಪ್ರಕರಣ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ಕಟ್ಟರ್‌ ಮುಸ್ಲಿಂ ರಾಷ್ಟ್ರದಲ್ಲಿ ಬದಲಾವಣೆಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ 33 ವರ್ಷದ ಸೌದಿ ಯುವರಾಜ ಮಹಮ್ಮದ್‌ ಬಿನ್‌ ಸಲ್ಮಾನ್‌ ಅವರ ನೈಜಮುಖವನ್ನು ಈ ಪ್ರಕರಣ ವಿಶ್ವದೆದುರು ತೆರೆದಿಟ್ಟಿದೆ. ತನ್ನನ್ನು ಪ್ರಶ್ನಿಸುವವರ ಅಥವಾ ತನಗೆ ಮುಂದೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎನ್ನುವವರನ್ನು ಸದ್ದಿಲ್ಲದೆ ಮುಗಿಸುವ ಸಲ್ಮಾನ್‌ ಅವರ ಕಾರ್ಯಶೈಲಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇಷ್ಟುದಿನ ಹೀರೋ ಆಗಿದ್ದ ಯುವರಾಜ ಈಗ ದಿಢೀರ್‌ ವಿಲನ್‌ ಆಗಿ ಬದಲಾಗಿದ್ದೇಕೆ? ಆಸಕ್ತಿಕರ ವಿವರ ಇಲ್ಲಿದೆ.
 

Saudi prince Mohammed bin Salman never was a reformer This has proved it

ಬೆಂಗಳೂರು(ಅ.22): ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಅಂಕಣ ಬರೆಯುತ್ತಿದ್ದ ಸೌದಿ ಮೂಲದ ಹಿರಿಯ ಪತ್ರಕರ್ತ ಜಮಾಲ್‌ ಖಶೋಗ್ಗಿ ಎಂಬುವರು ಇದೇ ಅಕ್ಟೋಬರ್‌ 2ರಂದು ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿಗೆ ತಮ್ಮ ಮಾಜಿ ಪತ್ನಿಗೆ ವಿಚ್ಛೇದನ ನೀಡಲು ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ತೆರಳಿದ್ದರು. ಆದರೆ ಅಲ್ಲಿಂದ ಎರಡು ವಾರವಾದರೂ ಹೊರಬರಲಿಲ್ಲ. 

ಸೌದಿ ಅರೇಬಿಯಾದ ರಾಜಮನೆತನದ ವಿರುದ್ಧ, ವಿಶೇಷವಾಗಿ ಯುವರಾಜ ಮಹಮ್ಮದ್‌ ಬಿನ್‌ ಸಲ್ಮಾನ್‌ (ಎಂಬಿಎಸ್‌) ವಿರುದ್ಧ ನಿರಂತರವಾಗಿ ವಿವಾದಾತ್ಮಕ ಬರಹಗಳನ್ನು ಬರೆಯುತ್ತಿದ್ದ ಖಶೋಗ್ಗಿ ಅವರನ್ನು ಸೌದಿಯ ಪ್ರಭಾವೀ ವ್ಯಕ್ತಿಗಳೇ ಸಾಯಿಸಿದ್ದಾರೆ ಎಂದು ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ವಿಷಯ ಜಗತ್ತಿನಾದ್ಯಂತ ಸುದ್ದಿಯಾಯಿತು. ಸೌದಿ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಯಿತು. ಸೌದಿಯ ಸ್ನೇಹಿತ ರಾಷ್ಟ್ರ ಅಮೆರಿಕ ಕೂಡ ಈ ವಿಷಯದಲ್ಲಿ ಸೌದಿ ಯುವರಾಜ ಮಹಮ್ಮದ್‌ ಸಲ್ಮಾನ್‌ನನ್ನು ಎಚ್ಚರಿಸಿತ್ತು. 

ಮೊದಲೆಲ್ಲಾ ತನಗೂ ಖಶೋಗ್ಗಿ ನಾಪತ್ತೆಗೂ ಸಂಬಂಧವೇ ಇಲ್ಲ ಎಂದಿದ್ದ ಸೌದಿ ಆಡಳಿತ, ಕೊನೆಗೆ ಮೌನ ಮುರಿದು ಇಸ್ತಾಂಬುಲ್ ರಾಯಭಾರ ಕಚೇರಿಯಲ್ಲೇ ಖಶೋಗ್ಗಿಯನ್ನು ಕೊಲೆಗೈಯಲಾಗಿದೆ. ಅಲ್ಲಿ ಮಾತಿನ ಚಕಮಕಿ ನಡೆದು, ಕೊಲೆ ನಡೆದಿದೆ ಎಂದು ಹೇಳಿದೆ. ಆದರೆ ಅದರ ವಿವರವನ್ನು ಇದುವರೆಗೂ ನೀಡಿಲ್ಲ. ಈ ಹತ್ಯೆಯನ್ನು ಸೌದಿ ರಾಜಮನೆತನವೇ ಮಾಡಿಸಿದೆ ಎಂದು ಹೇಳಲಾಗುತ್ತಿದೆ.

ಯುವರಾಜನ ವೈರ ಕಟ್ಟಿಕೊಂಡಿದ್ದ ಪತ್ರಕರ್ತ:
ಖಶೋಗ್ಗಿ ಸದ್ಯ ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗೆ ಬರಹಗಾರರಾಗಿ ಕೆಲಸ ಮಾಡುತ್ತಿದ್ದರು. ಇವರ ತಂದೆ ಆಧುನಿಕ ಸೌದಿ ಅರೇಬಿಯಾದ ಸಂಸ್ಥಾಪಕರೆಂದೇ ಖ್ಯಾತರಾಗಿದ್ದ ಅಬ್ದುಲ್ಲಾ ಅಜೀಜ್‌ ಅವರ ಕುಟುಂಬ ವೈದ್ಯರಾಗಿದ್ದರು. ಖಶೋಗ್ಗಿ ಪತ್ರಕರ್ತ ಮಾತ್ರವಲ್ಲದೆ ದೊರೆಗಳಿಗೆ ವಿಶೇಷ ಸಲಹೆಗಾರರೂ ಆಗಿದ್ದರು. ಅವರು ಸೌದಿಯಲ್ಲಿ ಹಲವು ಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. 

ಅವರು ಮುಸ್ಲಿಂ ಮೂಲಭೂತವಾದಿಯಾಗಿರಲಿಲ್ಲ. ಭಯೋತ್ಪಾದನೆ ಮತ್ತು ಧಾರ್ಮಿಕ ಮೌಲ್ಯಗಳ ಮೇಲೆ ಆಡಳಿತ ನಡೆಸುವುದನ್ನು ಟೀಕಿಸುತ್ತಿದ್ದರು. ಮೊದಲು ಸೌದಿ ದೊರೆ ಕುಟುಂಬಕ್ಕೆ ಹತ್ತಿರವಾಗಿದ್ದ ಖಶೋಗ್ಗಿ ಇತ್ತೀಚಿನ ವರ್ಷಗಳಲ್ಲಿ ಮಹಮ್ಮದ್‌ ಸಲ್ಮಾನ್‌ ಆಡಳಿತದ ಕಟು ಟೀಕಾಕಾರಾಗಿದ್ದರು. ಆ ಕಾರಣಕ್ಕಾಗಿಯೇ ಖಶೋಗ್ಗಿ ಬರಹಗಳಿಗೆ ಅವರ ದೇಶದಲ್ಲಿಯೇ ಹಲವು ಬಾರಿ ಅಲ್ಲಿನ ಸರ್ಕಾರ ತಡೆಯೊಡ್ಡಿತ್ತು. 2017ರಲ್ಲಿ ಖಶೋಗ್ಗಿ ದೇಶ ಬಿಟ್ಟು ಪಲಾಯನ ಮಾಡಿದರು. 

ಬಳಿಕ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಅವರ ಲೇಖನಗಳು ಪ್ರಕಟವಾಗತೊಡಗಿದವು. ಬಿಬಿಸಿ ಮುಂತಾದ ಜಾಗತಿಕ ಸುದ್ದಿ ಮಾಧ್ಯಮಗಳಿಗೆ ಅವರು ನಿರಂತರ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸೌದಿ ಆಡಳಿತವನ್ನು ಟೀಕಿಸಿ ಅವರು ಲೇಖನಗಳನ್ನು ಬರೆಯುತ್ತಿದ್ದರಿಂದ ಕೆರಳಿದ್ದ ಅಲ್ಲಿನ ಸರ್ಕಾರ ಅವರ ಮನವೊಲಿಸಲೂ ಪ್ರಯತ್ನಿಸಿತ್ತು. ಅವರನ್ನು ಟರ್ಕಿಯಿಂದ ಸ್ವದೇಶಕ್ಕೆ ವಾಪಸ್ಸಾಗುವಂತೆಯೂ ಕೇಳಿತ್ತು. ಆದರೆ ಖಶೋಗ್ಗಿ ಟರ್ಕಿಯಿಂದ ಸೌದಿಗೆ ಹೋಗಿರಲಿಲ್ಲ.

ಸೌದಿಯ ಮಹತ್ವಾಕಾಂಕ್ಷೆಗೆ ಬ್ರೇಕ್‌ ಬಿತ್ತಾ?
ಇಸ್ತಾಂಬುಲ್‌ನಲ್ಲಿಯ ಸೌದಿ ರಾಯಭಾರ ಕಚೇರಿಯಿಂದ ಖಶೋಗ್ಗಿ ಕಣ್ಮರೆಯಾಗಿದ್ದಕ್ಕೆ ಜಗತ್ತಿನಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕಾಗಿ ಎಂಬಿಎಸ್‌ನ ಪ್ರತಿಷ್ಠಿತ ಯೋಜನೆ ವಿಷನ್‌-2030ಯಿಂದ ಹಲವು ಪ್ರಾಯೋಜಕರು ಹಿಂದೆ ಸರಿದಿದ್ದಾರೆ. ಇವುಗಳಲ್ಲಿ ವಿಶ್ವಬ್ಯಾಂಕ್‌, ನ್ಯೂಯಾರ್ಕ್ ಟೈಮ್ಸ್‌, ಫೈನಾನ್ಷಿಯಲ್‌ ಟೈಮ್ಸ್‌, ದಿ ಇಕಾನಾಮಿಸ್ಟ್‌, ಸಿಎನ್‌ಎನ್‌, ಲಾಸ್‌ ಏಂಜಲೀಸ್‌ ಟೈಮ್ಸ್‌, ಹಫಿಂಗ್‌ಟನ್‌ ಪೋಸ್ಟ್‌, ವೈಯಾಕಾಮ್‌, ಜೆಪಿ ಮಾರ್ಗನ್‌, ಫೋರ್ಡ್‌ ಸೇರಿವೆ. 

ದಿ ಇಕಾನಾಮಿಸ್ಟ್‌ ಅಂತೂ ಎಂಬಿಎಸ್‌ ಅವರ ಆಡಳಿತವು ‘ಅರಬ್‌ ರಾಷ್ಟ್ರೀಯವಾದಿ ಸರ್ವಾಧಿಕಾರವನ್ನು ಹೋಲುವಂತೆ ಇದೆ’ ಎಂದು ಹೇಳಿದೆ. ಒಟ್ಟಾರೆ ಖಶೋಗ್ಗಿ ಪ್ರಕರಣವು ಇದುವರೆಗೆ ಸುಧಾರಣಾವಾದಿಯಾಗಿ ಕಾಣಿಸಿಕೊಂಡಿದ್ದ ಎಂಬಿಎಸ್‌ನ ಮತ್ತೊಂದು ಮುಖವನ್ನು ಜಗತ್ತಿನೆದುರಿಗೆ ತೆರೆದಿಟ್ಟಿದೆ. ದೇಶದ ಆರ್ಥಿಕ ಬೆಳವಣಿಗೆ, ಭದ್ರತೆ, ಸ್ಥಿರತೆ, ಉದ್ಯೋಗ ಸೃಷ್ಟಿಯಲ್ಲಾದ ಪ್ರಗತಿ, ಸ್ತ್ರೀ ಸ್ವಾತಂತ್ರ್ಯದ ಜೊತೆಜೊತೆಗೇ ಅವರು ಇನ್ನೂ ಹಲವು ಕೆಲಸಗಳಿಗೆ ಕೈಹಾಕಿದ್ದರು. ಅವು ಅವರ ಹುದ್ದೆಯನ್ನು ರಕ್ಷಿಸಿಕೊಳ್ಳುವ ಯತ್ನದ ಭಾಗವಾಗಿದ್ದವೇ ಎಂಬ ಪ್ರಶ್ನೆ ಈಗ ಮೂಡಿದೆ.

ಯುವರಾಜನ ‘ತುಘಲಕ್‌ ದರ್ಬಾರ್‌!’
 ಮಹಮ್ಮದ್‌ ಬಿನ್‌ ಸಲ್ಮಾನ್‌ ಸೌದಿಯ ಯುವರಾಜನಾಗಿದ್ದೇ ಅಡ್ಡದಾರಿಯಲ್ಲಿ. ಅಂದರೆ ಸಲ್ಮಾನ್‌ ಯುವರಾಜನ ಶ್ರೇಣಿಯಲ್ಲಿ ಕ್ರಮಬದ್ಧವಾಗಿ ಅಧಿಕಾರಕ್ಕೆ ಏರಿದವರಲ್ಲ. ಇವರ ಅಣ್ಣ 55 ವರ್ಷದ ಮೊಹಮ್ಮದ್‌ ಬಿನ್‌ ನಯೀಫ್‌ ಮೊದಲ ಸ್ಥಾನದಲ್ಲಿದ್ದರು. ಅವರನ್ನು ಬೈಪಾಸ್‌ ಮಾಡಿ ಜೂನ್‌ 2017ರಲ್ಲಿ ಸಲ್ಮಾನ್‌ ಯುವರಾಜನಾಗಿದ್ದರು.

ಸಲ್ಮಾನ್‌ ಯುವರಾಜನಾಗಿ ಅಧಿಕಾರ ಪಡೆಯುತ್ತಿದ್ದಂತೆ ರಾಜ ಕುಟುಂಬದ ಅನೇಕ ಸದಸ್ಯರು, ಅವರ ಸಹಾಯಕರು ಮತ್ತು ಅತಿ ಶ್ರೀಮಂತ 100 ಜನ ಉದ್ಯಮಿಗಳನ್ನು ಭ್ರಷ್ಟಾಚಾರದ ನೆಪದಲ್ಲಿ ಜೈಲಿಗೆ ಅಟ್ಟಿದರು. ಇದಕ್ಕೆ ಯಾವುದೇ ತನಿಖೆಯಾಗಲೀ, ಪಾರದರ್ಶಕತೆಯಾಗಲೀ ಇರಲಿಲ್ಲ.

 ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಲೇ ಹತ್ತಾರು ಅಹಿಂಸಾವಾದಿ ಧಾರ್ಮಿಕ ಗುರುಗಳು, ಇಸ್ಲಾಮಿಕ್‌ ಬುದ್ಧಿಜೀವಿಗಳನ್ನು ಮಹಮ್ಮದ್‌ ಬಿನ್‌ ಸಲ್ಮಾನ್‌ ಜೈಲಿಗೆ ತಳ್ಳಿದರು.  ಇಬ್ಬರು ಮಹಿಳಾ ಮಾನವ ಹಕ್ಕು ಹೋರಾಟಗಾರ್ತಿಯರ ಬಂಧನವನ್ನು ವಿರೋಧಿಸಿದ್ದಕ್ಕೆ ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿದ್ದ ಕೆನಡಾ ರಾಯಭಾರ ಕಚೇರಿಯನ್ನು ಹೊರಗಟ್ಟಿದರು.

2017ರಲ್ಲಿ ಜೆಡ್ಡಾಗೆ ಭೇಟಿ ನೀಡಿದ್ದ ಲೆಬನಾನಿನ ಪ್ರಧಾನಿ ಸಾದ್‌ ಹರಿರಿಯನ್ನು 2 ವಾರ ಬಂಧಿಸಿಟ್ಟರು. ಒಂದು ದೇಶದ ಪ್ರಧಾನಿಯನ್ನೇ ಬಂಧಿಸುವ ದುಸ್ಸಾಹಸ ಮಾಡಿದ್ದು ಸಲ್ಮಾನ್‌ರ ಸರ್ವಾಧಿಕಾರದ ಪರಾಕಾಷ್ಠೆಯಾಗಿತ್ತು. ಲೆಬನಾನನ್ನು ಸೌದಿಯ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂಬ ಎಂಬಿಎಸ್‌ನ ಆಲೋಚನೆಯ ಭಾಗವಾಗಿತ್ತು ಅದು.

ಸಲ್ಮಾನ್‌ ತಂದಿದ್ದ ಸುಧಾರಣೆಗಳೇನು?
ಮಹಮ್ಮದ್‌ ಬಿನ್‌ ಸಲ್ಮಾನ್‌ 2017ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸೌದಿ ಅರೇಬಿಯಾದಲ್ಲಿ ಮಹಿಳಾ ಸ್ವಾತಂತ್ರ್ಯದ ಹೊಸ ಶಕೆಯೇ ಆರಂಭವಾಗಿದೆ ಎಂಬ ಮಾತು ಕೇಳಿಬರುತ್ತಿತ್ತು. ಕಾರಣ ಅಲ್ಲಿನ ಮಹಿಳೆಯರಿಗೆ ವಿಧಿಸಲಾಗಿದ್ದ ಬಿಗಿ ನಿಯಮವನ್ನು ಸಲ್ಮಾನ್‌ ತೆಗೆದುಹಾಕಿದ್ದರು. 

ಕಟ್ಟರ್‌ ಮುಸ್ಲಿಂ ಸಂಪ್ರದಾಯವಾದಿ ರಾಷ್ಟ್ರವಾದ ಸೌದಿಯಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು. ದೇಶದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ಮಹಿಳೆಯರಿಗೆ ಚಾಲನಾ ಪರವಾನಗಿ, ಕ್ರೀಡಾಂಗಣ ಪ್ರವೇಶಕ್ಕೆ ಅನುಮತಿ ನೀಡಿದ್ದರು. ಧಾರ್ಮಿಕ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಿದರು. ರೋಬೊಟ್‌ಗೆ ಪೌರತ್ವ ನೀಡಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದರು. ನಿಯೋಮ್‌ ಎಂಬ ಸ್ವರ್ಗನಗರಿ ನಿರ್ಮಾಣಕ್ಕೆ ಅಣಿಯಾದರು. 

ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ‘ವಿಷನ್‌-2030’ ಭಾಗವಾಗಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಸಾಕಷ್ಟುಸುಧಾರಣೆಗಳನ್ನು ಜಾರಿಗೊಳಿಸಿದರು. ತೈಲದ ಮೇಲೆ ಅವಲಂಬಿತವಾಗಿದ್ದ ಸೌದಿಯ ಆರ್ಥಿಕತೆಯನ್ನು ಪ್ರವಾಸೋದ್ಯಮ ಹಾಗೂ ಇತರ ಮೂಲಗಳಿಂದ ಕಟ್ಟಿಕೊಳ್ಳಲು ಭೂಮಿಕೆ ಹಾಕಿದ್ದರು. ಇದನ್ನು ಜಗತ್ತೇ ಮೆಚ್ಚಿಕೊಂಡಿತ್ತು.

ಸೌದಿಯಲ್ಲೇಕೆ ರಾಜ, ಯುವರಾಜ ಇದ್ದಾರೆ?
ಸೌದಿ ಅರೇಬಿಯಾದಲ್ಲಿ ಪ್ರಜಾಪ್ರಭುತ್ವ ಇಲ್ಲ. ಬದಲಿಗೆ ರಾಜನ ಆಳ್ವಿಕೆಯಿದೆ. ಸಲ್ಮಾನ್‌ ಕುಟುಂಬ ಈ ದೇಶವನ್ನು ಆಳುತ್ತಿದೆ. ಆದರೆ, ಇವರು ಸರ್ವಾಧಿಕಾರಿಗಳಂತೆ ಆಡಳಿತ ನಡೆಸದೆ ಸರ್ಕಾರದ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಸೌದಿಯ ರಾಜನ ಹೆಸರು ಸಲ್ಮಾನ್‌ ಬಿನ್‌ ಅಬ್ದುಲಜೀಜ್‌ ಅಲ್‌ ಸೌದ್‌. ಇವರೇ ಈ ದೇಶದ ಪ್ರಧಾನ ಮಂತ್ರಿ. 

ಇವರಿಗೆ ಆಡಳಿತದಲ್ಲಿ ನೆರವು ನೀಡಲು ಯುವರಾಜರು ಇರುತ್ತಾರೆ. ಇವರನ್ನು ಉಪ ಪ್ರಧಾನಿ ಎನ್ನುತ್ತಾರೆ. ಪ್ರಸ್ತುತ ಯುವರಾಜನಾಗಿರುವ ಮಹಮ್ಮದ್‌ ಬಿನ್‌ ಸಲ್ಮಾನ್‌ ಅವರು ರಾಜ ಅಬ್ದುಲಜೀಜ್‌ ಅಲ್‌ ಸೌದ್‌ ಅವರ ಮಗ. ರಾಜ ಹೆಚ್ಚುಕಮ್ಮಿ ತೆರೆಮರೆಯಲ್ಲೇ ಇರುವುದರಿಂದ ಯುವರಾಜನ ಕೈಲಿ ದೇಶದ ಚುಕ್ಕಾಣಿಯಿರುತ್ತದೆ.

Latest Videos
Follow Us:
Download App:
  • android
  • ios