'ಲೋಕಸಭೆಗೆ ಸತೀಶ್‌ ಜಾರಕಿಹೊಳಿ ಸ್ಪರ್ಧೆ ಖಚಿತ' ಎಂದು ಅವರ ಸಹೋದರ, ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಆದ್ರೆ ಯಾವ ಕ್ಷೇತ್ರದಿಂದ?

ಬೆಳಗಾವಿ, [ಅ.14]: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಸ್ಪರ್ಧಿಸುವುದು ಖಚಿತ ಎಂದು ಅವರ ಸಹೋದರ, ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಒಂದೊಮ್ಮೆ ಸತೀಶ್‌ ಚಿಕ್ಕೋಡಿಯಿಂದ ಸ್ಪರ್ಧಿಸಿದರೆ, ಬೆಳಗಾವಿಯಿಂದ ಪ್ರಕಾಶ್‌ ಹುಕ್ಕೇರಿ ಕಣಕ್ಕಿಳಿಯಲಿದ್ದಾರೆ. ಈ ಸಂಬಂಧ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಪಕ್ಷದ ಹೈಕಮಾಂಡ್‌ ಉಪ ಚುನಾವಣೆ ಟಿಕೆಟ್‌ ಹಂಚಿಕೆ ತೀರ್ಮಾನ ಕೈಗೊಳ್ಳಲಿದ್ದು, ಪಕ್ಷದ ನಾಯಕರು ಹೇಳಿದರೆ ನಾನು ಪ್ರಚಾರ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಕೆಲವು ಕಡೆ ಫೈಟ್‌ ಇದೆ. 

ಬಹುತೇಕ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ನನಗೆ ಜಮಖಂಡಿ ಕೊಡಲಿ ಇಲ್ಲವೇ ಬಳ್ಳಾರಿ ಮತ್ತು ಶಿವಮೊಗ್ಗ ಕೊಡಲಿ ಅಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.