ಅಹಮದಾಬಾದ್‌[ಆ.05]: ನರ್ಮದಾ ನದಿಯ ಮೇಲೆ ನಿರ್ಮಿಸಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪ್ರತಿಮೆ ಬ್ರಿಟನ್‌ ಮೂಲದ ಇನ್ಸ್‌ಸ್ಟಿಟ್ಯೂಷನ್‌ ಆಫ್‌ ಸ್ಟ್ರಕ್ಚರಲ್‌ ಎಂಜಿನಿಯ​ರ್‍ಸ್ನ ಸ್ಟ್ರಕ್ಚರಲ್‌ ಅವಾರ್ಡ್ಸ್-2019 (ಅತ್ಯುತ್ತಮ ರಚನೆ ಪ್ರಶಸ್ತಿ)ಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

182 ಮೀಟರ್‌ ಎತ್ತರದ ಸರ್ದಾರ್‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ 2018ರ ಅಕ್ಟೋಬರ್‌-31ರಂದು ಅನಾವರಣಗೊಳಿಸಿದ್ದರು. ಬೃಹತ್‌ ಗಾತ್ರ ಹಾಗೂ ನಿರ್ಮಾಣವಾದ ಸ್ಥಳದ ಕಾರಣದಿಂದಾಗಿ ಸರ್ದಾರ್‌ ಪ್ರತಿಮೆ ವಿಶೇಷ ಎನಿಸಿಕೊಂಡಿದೆ. ಈ ರಚನೆ ನಿರ್ಮಿಸಲು ಎಂಜಿನಿಯರ್‌ಗಳು ಕಠಿಣ ಸಲವಾಲುಗಳನ್ನು ಎದುರಿಸಿದ್ದಾರೆ ಎಂದು ತೀರ್ಪುಗಾರರ ಸಮಿತಿ ಅಭಿಪ್ರಾಯಪಟ್ಟಿದೆ.

ಚೀನಾದ ಹಾಂಗ್ಜೌನಲ್ಲಿ ತಿರುಗುವ ಪ್ಯಾನಲ್‌ಗಳಿಂದ ನಿರ್ಮಿಸಿದ ಕ್ರೀಡಾಂಗಣ, ಲಂಡನ್‌ನಲ್ಲಿ ನೆಲದಿಂದ 22 ಮೀಟರ್‌ ಆಳದಲ್ಲಿ ನಿರ್ಮಿಸಿರುವ ಪಂಚತಾರಾ ಹೋಟೆಲ್‌ ಸೇರಿದಂತೆ ವಿಶ್ವದೆಲ್ಲಡೆಯ 49 ರಚನೆಗಳು ಪ್ರಶಸ್ತಿಯ ಸುತ್ತಿಗೆ ಆಯ್ಕೆ ಆಗಿದ್ದು ನ.15ರಂದು ಪ್ರಶಸ್ತಿ ಘೋಷಣೆ ಆಗಲಿದೆ.