ಬೆಂಗಳೂರು :  ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದ ಆರೋಪದ ಮೇರೆಗೆ ಕುಖ್ಯಾತ ರೌಡಿ ಭರತ್‌ ಅಲಿಯಾಸ್‌ ಸ್ಲಂ ಭರತ ಹಾಗೂ ಆತನ ಆರು ಮಂದಿ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿಗೆ ಸ್ಲಂ ಭರತ ಕುರಿತು ತನಿಖೆ ನಡೆಸಿದಾಗ ಖ್ಯಾತ ನಟರೊಬ್ಬರ ಸುಪಾರಿ ಸಂಚು ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹಲವು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಕೆಂಗೇರಿ ಭರತ್‌ ನಿರತನಾಗಿದ್ದು, ಆತನ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳಿಂದ ಪೊಲೀಸರಿಗೆ ಸಿಗದೆ ಆತ ತಲೆಮರೆಸಿಕೊಂಡಿದ್ದ. ಕೊನೆಗೆ ಫೆ.5ರಂದು ಸ್ಲಂ ಭರತ್‌ನನ್ನು ಗುಂಡಿನ ದಾಳಿ ನಡೆಸಿ ಕೆಂಗೇರಿ ಸಮೀಪ ಸಿಸಿಬಿ ಬಂಧಿಸಿತ್ತು. ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದಾಗ ನಟನ ಕೊಲೆ ಸುಪಾರಿ ಸಂಗತಿ ಬಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗ ಸುಪಾರಿ ಸಂಚಿನ ಪ್ರಕರಣದಲ್ಲಿ ಭರತ್‌ ಮತ್ತು ಆತನ ಸಹಚರರನ್ನು ಬಂಧಿಸಿ, ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.