"ಬ್ರಹ್ಮಾವರ್'ನಲ್ಲಿ ಮಗಳ ಮನೆ ಇದೆ... ಬೈಲಹೊಂಗಲದಲ್ಲಿ ಮಗನ ಮನೆ ಇದೆ... ತಾನು ಎರಡೂ ಕಡೆ ಅಡ್ಡಾಡಿಕೊಂಡು ಆರಾಮವಾಗಿದ್ದೇನೆ. ಮಗ ಆಫೀಸರ್ ಆಗಿದ್ದಾನೆ... ತಾನು ಸುಖವಾಗಿದ್ದೇನೆ.. ಯಾವುದೇ ತೊಂದರೆ ಇಲ್ಲ. ದುಡ್ಡಿಗೂ ತೊಂದರೆ ಇಲ್ಲ. ಆದರೆ, ದೇವಸ್ಥಾನಕ್ಕೆ ಹೋಗುವ ಚಟ ಮಾತ್ರವಿದೆ..." ಎಂದು ಸದಾಶಿವ್ ಬ್ರಹ್ಮಾವರ್ ಹೇಳಿದ್ದಾರೆ.
ಬೆಂಗಳೂರು(ಆ. 16): ತಾವು ಯಾವುದೇ ಸಂಕಷ್ಟದಲ್ಲಿಲ್ಲ... ಕುಟುಂಬದ ಜೊತೆ ಸಂತೋಷವಾಗಿದ್ದೇನೆ. ಯಾರೂ ಕೂಡ ಗಾಬರಿಯಾಗಬೇಡಿ... ಇದು ಹಿರಿಯ ನಟ ಸದಾಶಿವ್ ಬ್ರಹ್ಮಾವರ ಅವರು ಖುದ್ದಾಗಿ ನೀಡಿರುವ ಸ್ಪಷ್ಟನೆಯಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಸದಾಶಿವ್ ಬ್ರಹ್ಮಾವರ್, ಕುಮಟಾ ಬಸ್ ಸ್ಟ್ಯಾಂಡ್'ನಲ್ಲಿ ತಾನು ಬಸ್'ಗೆ ಕಾಯುತ್ತಿದ್ದಾಗ ಕೆಲ ಹುಡುಗರು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
"ಕುಮಟಾ ಬಸ್ ನಿಲ್ದಾಣದಿಂದ ಬ್ರಹ್ಮಾವರ್'ಗೆ ಹೋಗಲು ಬಸ್'ಗೆ ಕಾಯುತ್ತಿದ್ದೆ. ಬಸ್ ವಿಳಂಬವಾಗಿತ್ತು; ತನಗೂ ಹಸಿವಾಗಿತ್ತು.. ಆ ಸಂದರ್ಭದಲ್ಲಿ ಕೆಲ ಸ್ಥಳೀಯರು ತನ್ನನ್ನು ಗುರುತು ಹಿಡಿದು ಬಳಿ ಬಂದು ಹೋಟೆಲ್'ಗೆ ಕರೆದುಕೊಂಡು ಹೋಗಿ ಊಟ ತಿನಿಸಿದರು. ಬಳಿಕ ತಾನು ಬ್ರಹ್ಮಾವರ್'ಗೆ ಹೋಗಬೇಕೆಂದಾಗ ಬಸ್ ಹತ್ತಿಸಿ ಕಳುಹಿಸಿದರು. ಕೆಲ ಹುಡುಗರನ್ನು ಬ್ರಹ್ಮಾವರ್'ವರೆಗೂ ಬಂದು ಬೀಳ್ಕೊಟ್ಟು ಹೋದರು... ಇದಷ್ಟೇ ಆಗಿದ್ದು..." ಎಂದು ಹಿರಿಯ ನಟರು ವಿವರಿಸಿದ್ದಾರೆ.
"ಬ್ರಹ್ಮಾವರ್'ನಲ್ಲಿ ಮಗಳ ಮನೆ ಇದೆ... ಬೈಲಹೊಂಗಲದಲ್ಲಿ ಮಗನ ಮನೆ ಇದೆ... ತಾನು ಎರಡೂ ಕಡೆ ಅಡ್ಡಾಡಿಕೊಂಡು ಆರಾಮವಾಗಿದ್ದೇನೆ. ಮಗ ಆಫೀಸರ್ ಆಗಿದ್ದಾನೆ... ತಾನು ಸುಖವಾಗಿದ್ದೇನೆ.. ಯಾವುದೇ ತೊಂದರೆ ಇಲ್ಲ. ದುಡ್ಡಿಗೂ ತೊಂದರೆ ಇಲ್ಲ. ಆದರೆ, ದೇವಸ್ಥಾನಕ್ಕೆ ಹೋಗುವ ಚಟ ಮಾತ್ರವಿದೆ..." ಎಂದು ಸದಾಶಿವ್ ಬ್ರಹ್ಮಾವರ್ ಹೇಳಿದ್ದಾರೆ.
ಏನಿದು ಘಟನೆ?
ಹಿರಿಯ ನಟ ಸದಾಶಿವ್ ಬ್ರಹ್ಮಾವರ್ ಅವರು ಬೀದಿಗೆ ಬಂದಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಸದಾಶಿವ್ ಬ್ರಹ್ಮಾವರ್ ಬೀದಿಯಲ್ಲಿರುವಂತಾಗಿದೆ ಎಂಬ ಸುದ್ದಿ ಇದೆ. ಮಕ್ಕಳ ಮನೆಯಲ್ಲಿ ಹಿರಿಯ ನಟರಿಗೆ ಕಿರಿಕಿರಿಯಾಗುತ್ತಿರುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಚಿತ್ರಲೋಕ ಡಾಟ್ ಕಾಮ್'ನಲ್ಲಿ ಈ ಬಗ್ಗೆ ನಿನ್ನೆ ಮೊದಲು ವರದಿ ಪ್ರಕಟವಾಗಿತ್ತು.