ನವದೆಹಲಿ :  ‘ಹಿಂದೂ ಹುಡುಗಿಯ ಮೈಮುಟ್ಟುವ ಕೈ ಇರಬಾರದು’ ಹಾಗೂ ‘ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಮುಸ್ಲಿಂ ಹುಡುಗಿಯ ಹಿಂದೆ ಓಡಿ ಹೋದ ವ್ಯಕ್ತಿ’ ಎಂಬ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೇಳಿಕೆಗಳನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಖಂಡಿಸಿದ್ದು, ಹೆಗಡೆ ಅವರ ವಜಾಗೆ ಆಗ್ರಹಿಸಿದ್ದಾರೆ.

ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಈ ಮನುಷ್ಯ (ಅನಂತಕುಮಾರ ಹೆಗಡೆ) ಪ್ರತಿಯೊಬ್ಬ ಭಾರತೀಯನಿಗೂ ಮುಜುಗರ ತರುವ ವ್ಯಕ್ತಿ. ಕೇಂದ್ರ ಸಚಿವರಾಗಲು ಅವರು ಅನರ್ಹರು. ವಜಾ ಆಗಲು ಅವರು ಯೋಗ್ಯರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಕೊಡಗಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ‘ಹಿಂದೂ ಹುಡುಕಿಯ ಮೈ ಮುಟ್ಟುವ ಕೈ ಇರಬಾರದು’ ಎಂದು ಹೆಗಡೆ ಹೇಳಿಕೆ ನೀಡಿದ್ದರು. ಜೊತೆಗೆ ಈ ಹೇಳಿಕೆಯನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾಡಿದ ಟೀಕೆಗೆ ತಿರುಗೇಟು ನೀಡುವ ವೇಳೆ ಹೆಗಡೆ ಅವರು ಟ್ವೀಟ್‌ ಮಾಡಿ ‘ ದಿನೇಶ್‌ ಗುಂಡೂರಾವ್‌ ಅವರು ಮುಸ್ಲಿಂ ಹುಡುಗಿಯ ಹಿಂದೆ ಓಡಿ ಹೋದ ವ್ಯಕ್ತಿ’ ಎಂದು ವ್ಯಂಗ್ಯವಾಡಿದ್ದರು.