ಬಿಜಿಂಗ್(ಆ.12): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಣಯದಿಂದ ನೆರೆಯ ಪಾಕಿಸ್ತಾನ ಮತ್ತು ಚೀನಾ ದೇಶಗಳು ದಂಗು ಬಡಿದಿವೆ. 

ಈಗಾಗಲೇ ಚೀನಾಗೆ ಹೋಗಿ ಬಂದಿರುವ ಪಾಕ್ ವಿದೇಶಾಂಗ ಸಚಿವ, ಅಲ್ಲಿಂದ ಮರಳಿ ಭಾರತದೊಂದಿಗೆ ಯುದ್ಧದ ಮಾತುಗಳನ್ನಾಡುತ್ತಿದ್ದಾರೆ. ಆದರೆ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಿ ಎಂದು ಚೀನಾ ಸಲಹೆ ನೀಡಿ ಶಾ ಮೊಹ್ಮದ್ ಅವರನ್ನು ದೂಡಿದೆ.

ಈ ಮಧ್ಯೆ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮೂರು ದಿನಗಳ ಚೀನಾ ಪ್ರವಾಸದಲ್ಲಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿ ಜೈಶಂಕರ್ ಮಾತುಕತೆ ನಡೆಸಿದರು.

ಚೀನಾ ಮತ್ತು ಭಾರತದ ನಡುವಿನ ಸಂಬಂಧ ಗಟ್ಟಿಯಾಗಿ ಇರಬೇಕಾದುದು ಇಂದಿನ ತುರ್ತು ಅಗತ್ಯ ಎಂದು ಹೇಳಿದ ಜೈಶಂಕರ್, ಅಸ್ಥಿರ ಜಗತ್ತಿನಲ್ಲಿ ಭಾರತ-ಚೀನಾ ಸಂಬಂಧ ಸ್ಥಿರವಾಗಿರಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಸ್ಥಿರತೆಯ ಅಂಶವಾಗಿದ್ದು, ಇದು ದಕ್ಷಿಣ ಏಷ್ಯಾ ಮಾತ್ರವಲ್ಲದೇ ವಿಶ್ವ ರಾಜಕೀಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರಬಲ್ಲದು ಎಂದು ಜೈಶಂಕರ್ ಹೇಳಿದ್ದಾರೆ.