ನವದೆಹಲಿ[ಜು.02]: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ ಸಂಘ ಪರಿವಾರದ 6 ಹಿರಿಯ ನಾಯಕರು ಸೋಮವಾರ ಟ್ವಿಟರ್‌ಗೆ ಪ್ರವೇಶ ಮಾಡಿದ್ದಾರೆ.

ಭಾಗವತ್‌ ಜೊತೆಗೆ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಯ್ಯಾಜಿ ಜೋಶಿ, ಮೂವರು ಜಂಟಿ ಕಾರ್ಯದರ್ಶಿಗಳಾದ ಸುರೇಶ್‌ ಸೋನಿ, ಕೃಷ್ಣ ಗೋಪಾಲ್‌, ವಿ. ಭಾಗಯ್ಯ, ಸಂಘದ ಪ್ರಚಾರ ವಿಭಾಗದ ಮುಖ್ಯಸ್ಥ ಅರುಣ್‌ ಕುಮಾರ್‌ ಮತ್ತು ಸಂಘದ ಮತ್ತೊಬ್ಬ ಹಿರಿಯ ನಾಯಕ ಅನಿರುದ್ಧ್ ದೇಶಪಾಂಡೆ ಟ್ವಿಟರ್‌ ಸೇರಿದವರು.

ಆದರೆ ಟ್ವಿಟರ್‌ ಖಾತೆ ತೆರೆದ ಹೊರತಾಗಿಯೂ ಈ ನಾಯಕರು, ಅದನ್ನು ಸಂಘಟನೆಯ ಮಾಹಿತಿ ಹಂಚಿಕೆ ಮಾಡಲು ಮತ್ತು ಜನರೊಂದಿಗೆ ಬೆರೆಯಲು ಬಳಸುವ ಸಾಧ್ಯತೆ ಕಡಿಮೆ. ತಮ್ಮ ಹೆಸರಲ್ಲಿ ನಕಲಿ ಖಾತೆ ತೆರೆದು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ತಾವೇ ಖಾತೆ ಆರಂಭ ಮಾಡಲು ಈ ನಾಯಕರು ನಿರ್ಧರಿಸದ್ದಾರೆ ಎಂದು ಮೂಲಗಳು ತಿಳಿಸಿವೆ.