ಡಾ|ಕಾಮಿನಿ ರಾವ್ ಅವರದೂ ಸೇರಿ ನಗರದ 2 ಐವಿಎಫ್, 5 ಡಯಗ್ನೊಸ್ಟಿಕ್ ಕೇಂದ್ರಗಳಿಗೆ ಇತ್ತೀಚೆಗೆ ದಾಳಿ ನಡೆಸಿದ್ದ ಐಟಿ ಇಲಾಖೆ ಈ ವೇಳೆ ಭಾರೀ ಪ್ರಮಾಣದ ಅಘೋಷಿತ ಆಸ್ತಿ ಪತ್ತೆ ಪರೀಕ್ಷೆಗೆ ಶಿಫಾರಸು ಮಾಡಿ ಕಮಿಷನ್ ಪಡೆವ ವೈದ್ಯರ ದಂಧೆಯೂ ಬಹಿರಂಗ ಮೂರು ದಿನಗಳ ಕಾಲ ನಡೆದ ದಾಳಿ ವೇಳೆ ಪತ್ತೆಯಾದ ನಗದು ₹1.4 ಕೋಟಿ ತೆರಿಗೆ ಅಧಿಕಾರಿಗಳು ವಶಪಡಿಸಿ ಕೊಂಡ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ 3.5 ಕೇಜಿ ಕೋಟಿಗಟ್ಟಲೆ ವಿದೇಶಿ ಕರೆನ್ಸಿ, ವಿದೇಶಿ ಬ್ಯಾಂಕ್ ಖಾತೆ ವಿವರ ಪತ್ತೆ
ಬೆಂಗಳೂರು: ರಾಜಕಾರಣಿಗಳ ಮತ್ತು ವಿವಿಧ ವಲಯದ ಉದ್ಯಮಿಗಳ ತೆರಿಗೆ ವಂಚನೆ ಬಣ್ಣ ಬಯಲು ಮಾಡುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ವೈದ್ಯಕೀಯ ಕ್ಷೇತ್ರದ ತೆರಿಗೆ ವಂಚನೆಯತ್ತ ಗಮನ ಹರಿಸಿದ್ದಾರೆ.
ಇದರ ಪರಿಣಾಮ ಖ್ಯಾತ ಸ್ತ್ರೀರೋಗ ತಜ್ಞೆ ಡಾ|ಕಾಮಿನಿರಾವ್ ಅವರಿಗೆ ಸೇರಿದ ಕೇಂದ್ರವು ಸೇರಿದಂತೆ ಎರಡು ಐವಿಎಫ್ ಕೇಂದ್ರಗಳು ಹಾಗೂ ಐದು ಡಯಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಇತ್ತೀಚೆಗೆ ದಾಳಿ ನಡೆದಿದ್ದು,ಈ ವೇಳೆ 100 ಕೋಟಿ ರು. ಅಘೋಷಿತ ಆದಾಯದ ದಾಖಲೆ ಹಾಗೂ 1.4 ಕೋಟಿ ರು. ನಗದು, 3.5ಕೆಜಿ ಚಿನ್ನ ಮತ್ತು ಚಿನ್ನದ ಗಟ್ಟಿ, ವಿದೇಶಿ ಕರೆನ್ಸಿ ಮತ್ತು ವಿದೇಶಿ ಬ್ಯಾಂಕ್ ಖಾತೆಯಲ್ಲಿ ಗೌಪ್ಯವಾಗಿ ಕೋಟ್ಯಂತರ ರು. ಠೇವಣಿ ಇಟ್ಟಿರುವ ದಾಖಲೆಗಳು ಪತ್ತೆಯಾಗಿದೆ.
ಇದಲ್ಲದೆ, ಒಂದು ಡಯಗ್ನೋಸ್ಟಿಕ್ ಕೇಂದ್ರದಲ್ಲಿ ಸುಮಾರು 200 ಕೋಟಿ ರು.ನಷ್ಟು ಮೊತ್ತದ ಶಿಫಾರಸು ಶುಲ್ಕ (ಈ ಕೇಂದ್ರದಲ್ಲಿ ವಿವಿಧ ವೈದ್ಯಕೀಯ ತಪಾಸಣೆ ನಡೆಸುವಂತೆ ರೋಗಿಗಳಿಗೆ ಮಾಡಿದ ಶಿಫಾರಸಿಗೆ ಬದಲಾಗಿ ಕೇಂದ್ರವು ವೈದ್ಯರಿಗೆ ಪಾವತಿಸಿದ ಶುಲ್ಕ) ವನ್ನು ವೈದ್ಯರಿಗೆ ಪಾವತಿಸಿದ ದಾಖಲೆಗಳು ಲಭ್ಯವಾಗಿದೆ.
ಕಳೆದ ಮೂರು ದಿನಗಳ ಕಾಲ ತೆರಿಗೆ ವಂಚನೆ ಆರೋಪ ಸಂಬಂಧ ಸ್ತ್ರೀರೋಗ ತಜ್ಞೆ ಡಾ.ಕಾಮಿನಿರಾವ್ ಒಡೆತನದ ಸಂಸ್ಥೆಗಳು ಹಾಗೂ ಇತರೆ ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಸಿದ ಕಾರ್ಯಾಚರಣೆ ವೇಳೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಗೆ ಈ ಅಪಾರ ಪ್ರಮಾಣದ ಅಘೋಷಿತ ಹಣದ ದಾಖಲೆ, ವಿದೇಶಿ ಕರೆನ್ಸಿ ಮತ್ತು ವೈದ್ಯರ ಅಕ್ರಮಗಳು ಪತ್ತೆಯಾಗಿದೆ.
ಶಿಫಾರಸು ಮಾಡಿ ಅಕ್ರಮ ಹಣ ಸಂಪಾದನೆ: ವಿಶೇಷವಾಗಿ ಐದು ಡಯಗ್ನೋಸ್ಟಿಕ್ ಕೇಂದ್ರಗಳ ಮೇಲೆ ನಡೆದ ದಾಳಿಯಲ್ಲಿ ವೈದ್ಯರ ರೋಗಿಗಳನ್ನು ಆರ್ಥಿಕವಾಗಿ ಶೋಷಿಸಲು ನಡೆಸುತ್ತಿದ್ದ ಹಲವು ಅಕ್ರಮ ವ್ಯವಹಾರಗಳ ಮಾಹಿತಿ ಬಯಲಾಗಿವೆ. ವೈದ್ಯಕೀಯ ಪರೀಕ್ಷೆಗಳಿಗಾಗಿ ಡಯಗ್ನೋಸ್ಟಿಕ್ ಕೇಂದ್ರಗಳಿಗೆ ರೋಗಿಗಳನ್ನು ಶಿಫಾರಸು ಮಾಡಿ ಯಾವ ರೀತಿಯಲ್ಲಿ ಅಕ್ರಮ ಹಣ ಸಂಪಾದಿಸುತ್ತಾರೆ ಎಂಬುದು ಪರಿಶೀಲನೆ ವೇಳೆ ಬಯಲಾಗಿದೆ. ಡಯಗ್ನೋಸ್ಟಿಕ್ ಕೇಂದ್ರಗಳಿಂದ ಕಮಿಷನ್ ಪಡೆದುಕೊಳ್ಳುವ ವೈದ್ಯರು ಇದಕ್ಕೆ ಯಾವುದೇ ರೀತಿಯ ಅಧಿಕೃತ ದಾಖಲೆಗಳನ್ನು ನಿರ್ವಹಣೆ ಮಾಡದಿರುವುದು ಬೆಳಕಿಗೆ ಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಎಂಆರ್‌ಐ ಸ್ಕ್ಯಾನ್ ಪರೀಕ್ಷೆಗೆ ಶೇ.35ರಷ್ಟು ಕಮಿಷನ್ ಪಡೆದುಕೊಳ್ಳುವ ವೈದ್ಯರು, ಸಿಟಿ ಸ್ಯಾನ್‌ಗೆ ಶೇ.20ರಷ್ಟು ಪಡೆದುಕೊಳ್ಳುತ್ತಿದ್ದರು. ಈ ಅಕ್ರಮ ಮೊತ್ತವನ್ನು ಮಾರುಕಟ್ಟೆ ವೆಚ್ಚವೆಂದು ನಮೂದಿಸಿ ತೆರಿಗೆ ವಂಚನೆ ಮಾಡುತ್ತಿದ್ದರು. ಅಕ್ರಮ ವಹಿವಾಟಿನ ಕುರಿತ ದಾಖಲೆಗಳನ್ನು ವಶಕ್ಕೆ ಪಡೆದು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ವೈದ್ಯರು ನಾಲ್ಕು ಮಾದರಿಯಲ್ಲಿ ಹಣವನ್ನು ಅಕ್ರಮವಾಗಿ ಸ್ವೀಕರಿಸುತ್ತಿರುವುದು ಕಂಡು ಬಂದಿದೆ. 15 ದಿನಕ್ಕೊಮ್ಮೆ ನಗದು ರೂಪದಲ್ಲಿ ಪಾವತಿ ಮಾಡಲಾಗುತ್ತಿತ್ತು. ಕೆಲವು ಡಯಗ್ನೋಸ್ಟಿಕ್ ಕೇಂದ್ರಗಳು ವೈದ್ಯರಿಗೆ ಮುಂಗಡವಾಗಿಯೇ ಕಮಿಷನ್ ಪಾವತಿ ಮಾಡುತ್ತಿದ್ದವು. ರೋಗಿಗಳನ್ನು ತಮ್ಮ ಕೇಂದ್ರಗಳಿಗೆ ಶಿಫಾರಸು ಮಾಡುವಂತೆ ಮಧ್ಯವರ್ತಿಗಳ ಮೂಲಕ ಕಳುಹಿಸಿಕೊಡಲಾಗುತ್ತಿತ್ತು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲವೊಂದು ಪ್ರಕರಣದಲ್ಲಿ ವೈದ್ಯರಿಗೆ ಚೆಕ್ ನೀಡಲಾಗುತ್ತಿತ್ತು. ಇದನ್ನು ತಮ್ಮ ಪುಸ್ತಕದಲ್ಲಿ ವೃತ್ತಿ ಶುಲ್ಕ ಎಂದು ನಮೂದಿಸಲಾಗುತ್ತಿತ್ತು. ರೋಗಿಗಳನ್ನು ತಪಾಸಣೆ ಮಾಡದೆ ಹಣವನ್ನು ಪಡೆದುಕೊಳ್ಳುತ್ತಿದ್ದು. ಡಯಗ್ನೋಸ್ಟಿಕ್ ಕೇಂದ್ರಗಳಿಗಾಗಲಿ, ತಮ್ಮ ಆಸ್ಪತ್ರೆಯಲ್ಲಾಗಲಿ ರೋಗಿಗಳನ್ನು ತಪಾಸಣೆ ಮಾಡುತ್ತಿರಲಿಲ್ಲ ಹಾಗೂ ಯಾವುದೇ ರೋಗಿಯ ರೋಗದ ಕುರಿತ ವರದಿಯನ್ನು ಸಹ ಬರೆಯದೆ ಅಕ್ರಮವಾಗಿ ಹಣ ಗಳಿಸುತ್ತಿದ್ದರು. ಇನ್ನುಳಿದ ಪ್ರಕರಣದಲ್ಲಿ ಆದಾಯ ಹಂಚಿಕೆ ಕರಾರು ಮಾಡಿಕೊಂಡು ವೈದ್ಯರು ಶಿಫಾರಸು ಶುಲ್ಕವನ್ನು ಪಡೆದುಕೊಳ್ಳುತ್ತಿದ್ದರು.
ಕೆಲವು ಪ್ರಯೋಗಾಲಯದ ಸಿಬ್ಬಂದಿ ಕಮಿಷನ್ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿದ್ದು, ವೈದ್ಯರಿಗೆ ಲಕೋಟೆಯಲ್ಲಿ (ಎನವಲಪ್ ಕವರ್) ಹಣ ಇಟ್ಟು ಪಾವತಿಸಲಾಗುತ್ತದೆ. ಇದರಲ್ಲಿ ಸಂಪೂರ್ಣವಾದ ವಿವರ ಇದ್ದು, ಕಡಿಮೆ ಮೊತ್ತ ಇಟ್ಟು ನೀಡಲಾಗುತ್ತದೆ. ಬಳಿಕ ಇದನ್ನು ಗಮನಿಸುವ ವೈದ್ಯರು ಖುದ್ದು ಪ್ರಯೋಗಾಲಯಕ್ಕೆ ತೆರಳಿ ಬಾಕಿ ಮೊತ್ತವನ್ನು ನಗದು ರೂಪದಲ್ಲಿ ಪಡೆದುಕೊಳ್ಳುತ್ತಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಯಾಗ್ನೋಟಿಕ್ ಕೇಂದ್ರಗಳಲ್ಲಿ ನಡೆಸಿದ ಶೋಧದ ವೇಳೆ 100 ಕೋಟಿ ರು. ಅಘೋಷಿತ ಆದಾಯದ ದಾಖ ಲಭ್ಯವಾಗಿವೆ. ಕೇಂದ್ರ ವೊಂದರಲ್ಲಿ ಶಿಫಾರಸು ಶುಲ್ಕವೇ 200 ಕೋಟಿ ರು. ಪಾವತಿ ಯಾಗಿರುವುದು ಗೊತ್ತಾಗಿದೆ. ಮೊದಲ ಹಂತದ ತನಿಖೆಯಲ್ಲಿ ಈ ಮಾಹಿತಿ ಲಭ್ಯವಾಗಿದ್ದು, ದಾಖಲೆಗಳ ಪರಿಶೀಲನೆ ಇನ್ನೂ ಮುಂದುವರಿಸಲಾಗಿದೆ. ಒಟ್ಟಾರೆ ಅಕ್ರಮದ ಬಗ್ಗೆ ಶೋಧ ಕಾರ್ಯ ನಡೆಸಿದ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
200 ಕೋಟಿ ರು. ಶಿಫಾರಸು ಶುಲ್ಕ!
ಡಯಗ್ನೋಸ್ಟಿಕ್ ಕೇಂದ್ರವೊಂದು ವೈದ್ಯರಿಗೆ 200 ಕೋಟಿ ರು. ‘ಶಿಫಾರಸು ಶುಲ್ಕ’ ಪಾವತಿಸಿದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಸಂದರ್ಭದಲ್ಲಿ ದಾಖಲೆ ಪತ್ರಗಳು ಸಿಕ್ಕಿವೆ. ಶಿಫಾರಸು ಶುಲ್ಕ ಅಂದರೆ, ನಿರ್ದಿಷ್ಟ ಡಯಗ್ನೋಸ್ಟಿಕ್ ಕೇಂದ್ರದಲ್ಲೇ ವಿವಿಧ ವೈದ್ಯಕೀಯ ತಪಾಸಣೆ ನಡೆಸುವಂತೆ ರೋಗಿಗಳಿಗೆ ಸೂಚನಾಪೂರ್ವಕ ಶಿಫಾರಸು ಮಾಡುವ ವೈದ್ಯರಿಗೆ ‘ಪ್ರತಿಫಲ’ವಾಗಿ ನೀಡುವ ಹಣ. ಇಷ್ಟೊಂದು ಮೊತ್ತದ ‘ಶಿಫಾರಸು ಶುಲ್ಕ’ ಪಾವತಿ ಕುರಿತು ಒಂದೇ ಡಯಗ್ನೋಸ್ಟಿಕ್ ಕೇಂದ್ರದಲ್ಲಿ ದಾಖಲೆ ಪತ್ರಗಳು ಪತ್ತೆಯಾಗಿರುವುದು ಹುಬ್ಬೇರಿಸುವಂತೆ ಮಾಡಿದೆ. ವೈದ್ಯರಿಗೂ ವೈದ್ಯಕೀಯ ಪ್ರಯೋಗಾಲಯಗಳಿಗೂ ಲಾಭ ತಂದುಕೊಡುವ ಈ ರೀತಿಯ ಅಕ್ರಮ, ಅನೈತಿಕ ದಂಧೆಯ ಜಾಲಗಳ ಕಬಂಧಬಾಹುಗಳು ಇನ್ನಷ್ಟಿರಬಹುದೇ? ಈ ರೀತಿಯ ಅನೈತಿಕ ಶಿಫಾರಸುಗಳನ್ನು ಮಾಡಿ ಕೆಲ ವೈದ್ಯರು ಕೋಟಿಗಟ್ಟಲೆ ಅಕ್ರಮ ಸಂಪತ್ತು ಪೇರಿಸಿರಬಹುದೇ ಎಂಬೆಲ್ಲ ಪ್ರಶ್ನೆ, ಅನುಮಾನಗಳು ಏಳಲು ಕಾರಣವಾಗಿದೆ.
