ಆಸ್ತಿ ವಿವಾದದ ಪ್ರಕರಣವೊಂದರಲ್ಲಿ ವಕೀಲರೊಬ್ಬರು ಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸುತ್ತಿಲ್ಲ ಎಂದು ಆರೋಪಿಸಿ ಅವರನ್ನು ಅಪಹರಿಸಿ ಚಿಕ್ಕಜಾಲ ಠಾಣಾ ವ್ಯಾಪ್ತಿ ಕಡೆ ಕರೆದೊಯ್ದು ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ವಕೀಲರು ಚಿಕ್ಕಜಾಲ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್‌ 307ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರು(ಜ.23): ತನ್ನ ವಿರುದ್ಧ ಸಾಕ್ಷಿ ಹೇಳುವವರ ವಿಳಾಸ ಕೊಡಿ ಎಂದು ಪೊಲೀಸರಿಗೇ ಬೆದರಿಕೆ ಹಾಕಿದ ರೌಡಿ ಶೀಟರ್‌ವೊಬ್ಬ ಇದೀಗ ಕಂಬಿ ಎಣಿಸುತ್ತಿರುವ ಘಟನೆ ನಗರದಲ್ಲಿ ನಡೆ​ಸಿದೆ. ಪೊಲೀಸರ ಹಲ್ಲೆಗೆ ಸಹಕಾರ ನೀಡಿದ ರೌಡಿ ಶೀಟರ್‌ನ ಸಹೋದ​ರಿಯ ವಿರುದ್ಧವೂ ಬಸ​ವೇಶ್ವರನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್‌ ಕಿರಣ್‌ ಕುಮಾರ್‌ ಸದ್ಯ ಜೈಲಿನ​ಲ್ಲಿದ್ದು, ಈತನ ಸಹೋದರಿಯನ್ನು ಪೊಲೀಸರು ಬಂಧಿಸಿಲ್ಲ. ಜನವರಿ 12ರ ರಾತ್ರಿ 9 ಗಂಟೆ ಸುಮಾರಿಗೆ ಬಸವೇಶ್ವರನಗರ ಪೊಲೀಸ್‌ ಠಾಣೆಗೆ ಬಂದ ರೌಡಿಶೀಟರ್‌ ಕಿರಣ್‌ ಕುಮಾರ್‌, ‘ನನ್ನ ಮೇಲೆ ದೂರು ನೀಡಿರುವ ವಕೀಲರ ಪರವಾದ ಸಾಕ್ಷಿಗಳು ಯಾರು?, ಅವರ ವಿಳಾಸ ಕೊಡಿ. ಆತ ವಕೀಲನಾಗಿದ್ದಕ್ಕೆ ಬದುಕಿದ್ದಾನೆ. ಇಲ್ಲವಾದರೆ ಆತನನ್ನೂ ಕೊಂದು ಬಿಡುತ್ತಿದ್ದೆ' ಎಂದು ಕೂಗಾಡಿದ್ದಾನೆ. ಕಾನ್‌ಸ್ಟೇಬಲ್‌ ರಘು ಜತೆ ಕೂಡ ಜಗಳವಾಡಿದ್ದಾನೆ.

ಈ ವೇಳೆ ಸಮಾಧಾನ ಮಾಡಿದ ರಘು, ಆ ರೀತಿ ಮಾತನಾಡಬಾರದು. ಇದು ಪೊಲೀಸ್‌ ಠಾಣೆ. ನಿಮ್ಮ ಮೇಲಿನ ಪ್ರಕರಣವನ್ನು ಚಿಕ್ಕಜಾಲ ಠಾಣೆಗೆ ವರ್ಗಾಯಿಸಲಾಗಿದೆ ಎಂದಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ಲಂಚ ಕೊಟ್ಟು ಕೆಲಸಕ್ಕೆ ಸೇರಿದ್ದೀರಿ. ಯಾರು ಏನು ಮಾಡಿ ಕೊಳ್ಳಲು ಸಾಧ್ಯವಿಲ್ಲ. ಅದು ಏನು ಮಾಡುತ್ತಿರೋ ಮಾಡಿಕೊಳ್ಳಿ ಎಂದು ಧಮ್ಕಿ ಹಾಕಿದ್ದಾನೆ.

ಮಾತಿನ ಚಕಮಕಿ ವೇಳೆ ಆರೋಪಿ ಕಾನ್‌ಸ್ಟೇಬಲ್‌ ರಘು ಅವರ ಶರ್ಟ್‌ ಹಿಡಿದು ಎಳೆದಾಡಿ, ಕುತ್ತಿಗೆ ಹಿಸುಕಿ ಹತ್ಯೆಗೈಯಲು ಯತ್ನಿಸಿದ್ದಾನೆ. ಕೂಡಲೇ ರಘು ನೆರವಿಗೆ ಧಾವಿಸಿದ ಇನ್ಸ್‌ಪೆಕ್ಟರ್‌, ಪಿಎಸ್‌ಐ ಹಾಗೂ ಎಎಸ್‌ಐ ಇತರೆ ಸಿಬ್ಬಂದಿಯ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಠಾಣೆಗೆ ಬಂದ ಕಿರಣ್‌ಕುಮಾರ್‌ ಸಹೋದರಿ, ‘ನನ್ನ ತಮ್ಮನಿಗೆ ಬುದ್ಧಿ ಹೇಳುತ್ತೇನೆ. ಬಿಟ್ಟು ಬಿಡಿ' ಎಂದು ಕೇಳಿಕೊಂಡಿದ್ದಾರೆ. ಈ ವೇಳೆಯೂ ಆರೋಪಿ ಪೊಲೀಸರಿಗೆ ಕೀಳು ಮಟ್ಟದ ಭಾಷೆಗಳಿಂದ ನಿಂದಿಸಿದ್ದಾನೆ. ಅಲ್ಲದೇ ತಾನೇ ಬಟ್ಟೆಹರಿದುಕೊಂಡು ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ತನ್ನ ಸಹೋದರಿಯ ಹೇಳಿದ್ದಾನೆ. ಇದಕ್ಕೆ ಒಪ್ಪಿದ ಸಹೋದರಿ ಕೂಡ, ‘ನನ್ನ ತಮ್ಮನನ್ನು ಬಿಡದಿದ್ದರೆ, ಕೋಟಿ ಖರ್ಚಾದರೂ ಬಿಡುವುದಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ನಿಮ್ಮೆಲ್ಲರ ವಿರುದ್ಧ ದೂರು ನೀಡುತ್ತೇನೆ' ಎಂದು ಬೆದರಿಕೆ ಹಾಕಿದ್ದಾರೆ.
ವಕೀಲರನ್ನೇಅಪಹರಿಸಿ ಹಲ್ಲೆ

ಆಸ್ತಿ ವಿವಾದದ ಪ್ರಕರಣವೊಂದರಲ್ಲಿ ವಕೀಲರೊಬ್ಬರು ಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸುತ್ತಿಲ್ಲ ಎಂದು ಆರೋಪಿಸಿ ಅವರನ್ನು ಅಪಹರಿಸಿ ಚಿಕ್ಕಜಾಲ ಠಾಣಾ ವ್ಯಾಪ್ತಿ ಕಡೆ ಕರೆದೊಯ್ದು ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ವಕೀಲರು ಚಿಕ್ಕಜಾಲ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್‌ 307ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ. ಆದರೆ, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಾಜ್‌ರ್‍ಶೀಟ್‌ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಸಾಕ್ಷ್ಯಗಳಿಗೆ ಬೆದರಿಕೆಯೊಡುತ್ತಿದ್ದು, ಈ ಘಟನೆ ಕುರಿತು ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ 2015ರಲ್ಲಿ ದೂರು ದಾಖಲಾಗಿತ್ತು. ಹಾಗಾಗಿ ಠಾಣೆಗೆ ಬಂದ ಆರೋಪಿ ಪ್ರಕರಣ ದಲ್ಲಿ ದೋಷಾರೋಪ ಪಟ್ಟಿಸಲ್ಲಿಸಿದ್ದನ್ನು ಆಕ್ಷೇಪಿಸಿ, ಗಲಾಟೆ ಮಾಡಿ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

(ಕನ್ನಡಪ್ರಭ ವಾರ್ತೆ)