ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ತವರಿನಲ್ಲಿ ಪ್ರಭಾವಿಗಳ ವಿರುದ್ಧ ಅರಣ್ಯ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಬಹಳ ಮಹತ್ವ ಪಡೆದುಕೊಂಡಿದೆ.
ತೀರ್ಥಹಳ್ಳಿ(ಆ.11): ಅರಣ್ಯ ಭೂಮಿ ಒತ್ತುವರಿ ತೆರವಿಗೆ ಹೋಗಿದ್ದ ವಲಯ ಅರಣ್ಯಾಧಿಕಾರಿಯ ಮೇಲೆ ರೌಡಿಶೀಟರ್ ದಾಳಿ ಮಾಡಿದ ಘಟನೆ ತೀರ್ಥಹಳ್ಳಿ ತಾಲೂಕಿನ ನೆಲ್ಲಿಸರ ಎಂಬಲ್ಲಿ ನಡೆದಿದೆ.
ಮಂಡಗದ್ದೆ ವಲಯ ಅರಣ್ಯಾಧಿಕಾರಿ ರಾಜೇಶ್ ಮತ್ತವರ ಸಿಬ್ಬಂದಿ ನೆಲ್ಲಿಸರ ಎಂಬಲ್ಲಿ ಅರಣ್ಯ ಇಲಾಖೆ ಭೂಮಿ ಒತ್ತುವರಿಯಾಗುತ್ತಿದೆ ಎಂದು ಸಿಬ್ಬಂದಿಯೊಂದಿಗೆ ಹೋಗಿದ್ದಾಗ ಕೆಲಸಗಾರರಿಗೂ ಇಲಾಖೆಯವರಿಗೆ ಮಾತಿನ ಚಕಮಕಿ ನಡೆಯಿತು. ಕೆಲವರನ್ನು ಬಂಧಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ರೌಡಿಶೀಟರ್ ಜುಲ್ಫಿಕರ್ ಮನೆ ಹತ್ತಿರವೂ ಅರಣ್ಯಾಧಿಕಾರಿಗಳು ಹೋದಾಗ ಅವರ ಜೀಪ್'ನ್ನು ಮತ್ತೊಂದು ವಾಹನದಲ್ಲಿ ಅಡ್ಡಗಟ್ಟಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಳಿ ಮಾಡಲಾಗಿದೆ. ನಂತರ ಈ ಬಗ್ಗೆ ಮಾಳೂರು ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿಜಯ್ ಕುಮಾರ್‌ರವರುಗಳು ಹೆಚ್ಚುವರಿ ಅರಣ್ಯ ಸಿಬ್ಬಂದಿ ಹಾಗೂ ಪೋಲಿಸರೊಂದಿಗೆ ಪುನಃ ಒತ್ತುವರಿ ತೆರವುಗೊಳಿಸಲು ಮುಂದಾದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ವಾದಕ್ಕಿಳಿದ ರೌಡಿಶೀಟರ್ ಜುಲ್ಫಿಕರ್ ಸಹೋದರ ಕೊನೆಗೆ ಆತ್ಮಹತ್ಯೆಯ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಒಟ್ಟಿನಲ್ಲಿ ಮಲೆನಾಡಿನ ಬಸವಾನಿ ಹೊಳೆಕೊಪ್ಪದಲ್ಲಿ 4 ಎಕರೆ ಅರಣ್ಯದಲ್ಲಿ ಬೆಳೆದ ಅಡಿಕೆ ಬೆಳೆ ಖುಲ್ಲಾ ಪಡಿಸಲು ನ್ಯಾಯಾಲಯದ ಆದೇಶದೊಂದಿಗೆ ಮಂಡಗದ್ದೆಯಲ್ಲಿ ಅರಣ್ಯ ಇಲಾಖೆ ಮತ್ತು ಕೃಷಿ ಒತ್ತುವರಿ ಹೆಸರಿನಲ್ಲಿ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿತ್ತು. ಇದೀಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ತವರಿನಲ್ಲಿ ಪ್ರಭಾವಿಗಳ ವಿರುದ್ಧ ಅರಣ್ಯ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಬಹಳ ಮಹತ್ವ ಪಡೆದುಕೊಂಡಿದೆ.
