ರಾಜಕೋಟ್(ಮೇ.18): ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡುವುದಕ್ಕಿಂತ ಪುಣ್ಯದ ಕೆಲಸ ಯಾವುದಿದೆ ಹೇಳಿ?. ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಅನ್ನದಾನ ಶ್ರೇಷ್ಠದಾನ ಎಂದು ಹೇಳಿರುವುದು.

ಅದರಂತೆ ಗುಜರಾತ್‌ನ ರಾಜಕೋಟ್‌ನಲ್ಲಿರುವ ಶ್ರೀ ಬೋಲ್‌ಭಲಾ ಎಂಬ ಚಾರಿಟೇಬಲ್ ಟ್ರಸ್ಟ್ ‘ರೋಟಿ ಬ್ಯಾಂಕ್’ ಹೆಸರಲ್ಲಿ ಹಸಿದ ಹೊಟ್ಟೆಗಳಿಗೆ ತುತ್ತು ಅನ್ನ ನೀಡುವ ಸತ್ಕಾರ್ಯದಲ್ಲಿ ನಿರತವಾಗಿದೆ.

ಮನೆಯಲ್ಲಿ ತಯಾರಿಸಿದ ರೊಟ್ಟಿಗಳನ್ನು ಆಟೋ ಚಾಲಕರ ಸಹಾಯದಿಂದ ನಿರ್ಗತಿಕರಿಗೆ ಮತ್ತು ಆಸ್ಪತ್ರೆಯ ರೋಗಿಗಳಿಗೆ ತಲುಪಿಸುವ ಕಾರ್ಯ ಬೋಲ್‌ಭಲಾ ಚಾರಿಟೇಬಲ್ ಟ್ರಸ್ಟ್‌ನದ್ದು.

ಈ ಕುರಿತು ಮಾಹಿತಿ ನೀಡಿರುವ ಟ್ರಸ್ಟ್ ಮುಖ್ಯಸ್ಥ ಜಯೇಶ್ ಉಪಾಧ್ಯಾ, ಸುಮಾರು 1,000 ಮನೆಗಳಿಂದ ತಲಾ ಎರಡು ರೊಟ್ಟಿಗಳನ್ನು ಶೇಖರಿಸಿ ಅದನ್ನು ನಿತ್ಯವೂ ನಿರ್ಗತಿಕರು ಮತ್ತು ಆಸ್ಪತ್ರೆಯ ರೋಗಿಗಳಿಗೆ ತಲುಪಿಸುವ ಕಾರ್ಯ ನಿತ್ಯವೂ ನಡೆಯುತ್ತದೆ ಎಂದು ಹೇಳಿದ್ದಾರೆ.

ಪಂಜಾಬ್, ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿ ಇಂತದ್ದೇ ರೋಟಿ ಬ್ಯಾಂಕ್‌ಗಳಿದ್ದು, ಅವುಗಳಿಂದ ಸ್ಪೂರ್ತಿ ಪಡೆದು ರಾಜಕೋಟ್‌ನಲ್ಲೂ ರೋಟಿ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಎಂದು ಜಯೇಶ್ ಮಾಹಿತಿ ನೀಡಿದರು.