ಬೆಂಗಳೂರು  [ಜು. 16]:  ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಆರೋಪದ ಮೇರೆಗೆ ಮಾಜಿ ಗೃಹ ಸಚಿವ ಹಾಗೂ ಹಾಲಿ ಕಾಂಗ್ರೆಸ್‌ ಶಾಸಕ ಆರ್‌.ರೋಷನ್‌ ಬೇಗ್‌ ಅವರನ್ನು ಸೋಮವಾರ ರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿ ಎಸ್‌ಐಟಿ ವಶಕ್ಕೆ ತೆಗೆದುಕೊಂಡಿದ್ದು, ಮಂಗಳವಾರ ಅಧಿಕೃತವಾಗಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆಯಿದೆ.

ಮಹಾಮೋಸ ಎಸಗಿದ ಬಳಿಕ ಭೂಗತನಾಗಿರುವ ಐಎಂಎ ಮಾಲಿಕ ಮನ್ಸೂರ್‌ ಖಾನ್‌ ಸೋಮವಾರ ಮಧ್ಯಾಹ್ನವಷ್ಟೇ ತಾನು 24 ತಾಸಿನೊಳಗೆ ಬೆಂಗಳೂರಿಗೆ ಮರಳುವುದಾಗಿ ಹೇಳಿದ ವಿಡಿಯೋ ಬಹಿರಂಗವಾಗಿತ್ತು. ಮನ್ಸೂರ್‌ ಹೇಳಿಕೆ ನೀಡಿದ ಕೆಲವೇ ತಾಸಿನೊಳಗೆ ರೋಷನ್‌ ಬೇಗ್‌ ವಶಕ್ಕೆ ಪಡೆದುಕೊಂಡಿರುವುದು ಕುತೂಹಲ ಕೆರಳಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಶೇಷ ವಿಮಾನದ ಮೂಲಕ ಮುಂಬೈಗೆ ಪಯಣಿಸಲು ರೋಷನ್‌ ಬೇಗ್‌ ಸಜ್ಜಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಡಿಸಿಪಿ ಎಸ್‌.ಗಿರೀಶ್‌ ನೇತೃತ್ವದ ತಂಡವು, ರಾತ್ರಿ 10.30ರ ವೇಳೆ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ. ಇದರೊಂದಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಮೊದಲ ರಾಜಕಾರಣಿ ರೋಷನ್‌ ಬೇಗ್‌ ಆಗಿದೆ.

ಐಎಂಎ ವಂಚನೆ ಕೃತ್ಯ ಬೆಳಕಿಗೆ ಬಂದ ದಿನದಿಂದಲೂ ಅದರಲ್ಲಿ ರೋಷನ್‌ ಬೇಗ್‌ ಹೆಸರು ಬಲವಾಗಿ ಕೇಳಿಬಂದಿತ್ತು. ಮನ್ಸೂರ್‌ ಖಾನ್‌ ಜೊತೆ ಮಾಜಿ ಸಚಿವರು ಆತ್ಮೀಯ ಸ್ನೇಹ ಹೊಂದಿದ್ದರು. ಇಬ್ಬರ ನಡುವೆ ವ್ಯಾವಹಾರಿಕ ಸಂಬಂಧ ಸಹ ಇತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪೂರಕ ಎನ್ನುವಂತೆ ಮಹಾಮೋಸದ ಆರೋಪ ಹೊತ್ತು ದೇಶ ತೊರೆಯುವ ಮುನ್ನ ಮನ್ಸೂರ್‌ ಖಾನ್‌, ಪೊಲೀಸ್‌ ಆಯುಕ್ತರಿಗೆ ಕಳುಹಿಸಿದ್ದ ಆಡಿಯೋದಲ್ಲಿ ತನ್ನಿಂದ 400 ಕೋಟಿ ರು. ಗಳನ್ನು ಶಿವಾಜಿನಗರ ಶಾಸಕರು ಚುನಾವಣೆ ವೇಳೆ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದ. ಇದಾದ ನಂತರ ಅಜ್ಞಾತ ಸ್ಥಳದಿಂದ ಬಿಡುಗಡೆಗೊಳಿಸಿದ ವಿಡಿಯೋ ಸಂದೇಶಗಳಲ್ಲಿ ಸಹ ಮನ್ಸೂರ್‌ ಶಿವಾಜಿನಗರ ಕ್ಷೇತ್ರದ ಶಾಸಕರಿಗೆ ಹಣ ನೀಡಿರುವ ವಿಷಯ ಪ್ರಸ್ತಾಪಿಸಿದ್ದ.

ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಐಟಿ ಅಧಿಕಾರಿಗಳು, ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್‌ ಜಾರಿಗೊಳಿಸಿದ್ದರು. ಆದರೆ ವಿಚಾರಣೆಗೆ ಬರುವುದಕ್ಕೆ ರೋಷನ್‌ ಬೇಗ್‌ ಕಾಲಾವಕಾಶ ಕೋರಿದ್ದರು. ಸೋಮವಾರ ಎರಡನೇ ಬಾರಿಗೆ ವಿಚಾರಣೆಗೆ ಗೈರಾದ ಮಾಜಿ ಸಚಿವರಿಗೆ ಈ ತಿಂಗಳ 19ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದರು.

ಇದೆಲ್ಲದರ ನಡುವೆ ಕಳೆದ ಶುಕ್ರವಾರ ರೋಷನ್‌ ಬೇಗ್‌ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಸುವ ಪ್ರಯತ್ನವೂ ನಡೆದಿತ್ತು.


ರಾಜಕೀಯ ಪಿತೂರಿ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ಆರ್‌.ರೋಷನ್‌ ಬೇಗ್‌ ಅವರ ಬಂಧನ ಹಿಂದೆ ಮೈತ್ರಿ ಸರ್ಕಾರದ ರಾಜಕೀಯ ಪಿತೂರಿ ಇದೆ. ವಂಚನೆ ಪ್ರಕರಣವನ್ನು ಮುಂದಿಟ್ಟು ಶಾಸಕರನ್ನು ಬೆದರಿಸಲು ಸರ್ಕಾರ ಯತ್ನಿಸುತ್ತಿದೆ. ವಿಧಾನಸಭಾ ಅಧಿವೇಶನ ನಡೆದಿರುವ ಹೊತ್ತಿನಲ್ಲಿ ಓರ್ವ ಶಾಸಕರನ್ನು ಹೇಗೆ ಬಂಧಿಸಲಾಗುತ್ತದೆ? ಸ್ಪೀಕರ್‌ ಶಾಸಕರ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು.

- ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಬೇಗ್‌ಗೆ ಬಿಜೆಪಿ ಸಾಥ್‌

ಐಎಂಎ ಕೇಸಲ್ಲಿ ರೋಷನ್‌ ಬೇಗ್‌ ವಿಚಾರಣೆಗೆ ಹಾಜರಾಗುವ ಬದಲು ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್‌ ಜೊತೆ ಮುಂಬೈಗೆ ವಿಶೇಷ ವಿಮಾನದಲ್ಲಿ ಹಾರಲು ಸಜ್ಜಾಗಿದ್ದರು. ಬಿಜೆಪಿಯ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಕೂಡ ಸ್ಥಳದಲ್ಲಿದ್ದರು. ಆಗ ಎಸ್‌ಐಟಿ ದಾಳಿ ನಡೆಸಿ ಬೇಗ್‌ ಅವರನ್ನು ವಶಕ್ಕೆ ಪಡೆದಿದೆ. ಸರ್ಕಾರ ಅಸ್ಥಿರಗೊಳಿಸುವಲ್ಲಿ ಬಿಜೆಪಿ ಪಾತ್ರವಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ