Asianet Suvarna News Asianet Suvarna News

ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿದ್ದೇಕೆ?

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿರುವುದರಲ್ಲಿ  ಇರುವ ಆಡಳಿತಾತ್ಮಕ ಹಿತದೃಷ್ಟಿ ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಆಡಳಿತಾತ್ಮಕ
ನ್ಯಾಯಮಂಡಳಿ ಮಂಗಳವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

Rohini Sindhuri Transfer

ಬೆಂಗಳೂರು (ಮಾ. 14): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿರುವುದರಲ್ಲಿ  ಇರುವ ಆಡಳಿತಾತ್ಮಕ ಹಿತದೃಷ್ಟಿ ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಆಡಳಿತಾತ್ಮಕ
ನ್ಯಾಯಮಂಡಳಿ ಮಂಗಳವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಅವಧಿ ಪೂರ್ವ ವರ್ಗಾವಣೆ ಪ್ರಶ್ನಿಸಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಮಂಡಳಿಯ ಸದಸ್ಯರಾದ ಡಾ.ಕೆ.ಬಿ.ಸುರೇಶ್ ಮತ್ತು ಪಿ.ಕೆ.ಪ್ರಧಾನ್ ಅವರಿದ್ದ ಪೀಠವು, ಅಧಿಕಾರಿಗಳನ್ನು ಸರ್ಕಾರ ಇಚ್ಛಿಸಿದಂತೆ ವರ್ಗಾವಣೆ ಮಾಡಲು ಅವಕಾಶವಿಲ್ಲ. ವರ್ಗಾವಣೆಯು ನಿಯಮಗಳಿಗೆ ಬದ್ಧವಾಗಿರಬೇಕು. ಯಾವುದೇ  ವರ್ಗಾವಣೆಗೆ ಸರ್ಕಾರ ಕಾರಣ ನೀಡಬೇಕಾಗುತ್ತದೆ.  ಈ ಹಿನ್ನೆಲೆಯಲ್ಲಿ ರೋಹಿಣಿ ಅವರ ವರ್ಗಾವಣೆಯ ಹಿಂದಿನ ಆಡಳಿತಾತ್ಮಕ
ಹಿತಾಸಕ್ತಿ ಯಾವುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮಾ.21 ಕ್ಕೆ ಮುಂದೂಡಿತು.

ಹಾಸನ ಜಿಲ್ಲಾಧಿಕಾರಿ  ಸ್ಥಾನದಿಂದ ವರ್ಗಾವಣೆ ಮಾಡದಂತೆ ಈ ಹಿಂದೆ ನೀಡಿದ್ದ  ತಡೆಯಾಜ್ಞೆಯನ್ನು ವಿಸ್ತರಿಸಿತು.  ವಿಚಾರಣೆ ವೇಳೆ ಹಾಜರಿದ್ದ ಅರ್ಜಿದಾರರ  ಪರ ವಕೀಲರು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಒಬ್ಬ ಅಧಿಕಾರಿಯನ್ನು ಕನಿಷ್ಠ ಎರಡು ವರ್ಷಗಳ ಕಾಲ ವರ್ಗಾವಣೆ ಮಾಡುವಂತಿಲ್ಲ. ಅದಕ್ಕೂ ಮುನ್ನ ವರ್ಗಾವಣೆ  ಮಾಡಬೇಕಾದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು. ಆದರೆ, ಅರ್ಜಿದಾರರನ್ನು (ಹಾಸನ ಜಿಲ್ಲಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ) ಏಳು ತಿಂಗಳಲ್ಲಿಯೇ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ವಾದ ಮಂಡಿಸಿದರು.

ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ  ಸರ್ಕಾರದ ಪರ ವಕೀಲರು, ಅವಧಿಗೂ ಮುನ್ನ ಅಧಿಕಾರಿಗಳನ್ನು  ವರ್ಗಾವಣೆ ಮಾಡಲು ಸರ್ಕಾರಕ್ಕೆ  ಅಧಿಕಾರವಿದೆ. ಅಲ್ಲದೆ, ಕೆಲ ಸಂದರ್ಭದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ
ಮಾಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕನಿಷ್ಠ ಎರಡು ವರ್ಷದ  ನಿಯಮ ಅನ್ವಯವಾಗುವುದಿಲ್ಲ ಎಂದು  ನ್ಯಾಯಪೀಠಕ್ಕೆ ವಿವರಿಸಿದರು. ಈ ವೇಳೆ ಅರ್ಜಿದಾರರ ಪರ ವಕೀಲರು  ಮಧ್ಯ ಪ್ರವೇಶಿಸಿ, ನಮ್ಮ ರಾಜ್ಯದಲ್ಲಿ  ಪ್ರಜಾಪ್ರಭುತ್ವದ ಆಧಾರದಲ್ಲಿ ಸರ್ಕಾರ   ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ನಿಯಮಗಳನ್ನು ಅನುಸರಿಸಬೇಕು ಎಂದು  ಕಾನೂನಿನಲ್ಲಿ ತಿಳಿಸಲಾಗಿದೆ. ಹೀಗಾಗಿ ಸರ್ಕಾರ ತನ್ನಿಷ್ಟದಂತೆ ವರ್ಗಾವಣೆ ಮಾಡುವುದು ಸರಿಯಲ್ಲ. ಈ ವರ್ಗಾವಣೆ ಹಿಂದಿನ ಆಡಳಿತಾತ್ಮಕ ಹಿತದೃಷ್ಟಿ ಯಾವುದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದೆ. 

Follow Us:
Download App:
  • android
  • ios