Asianet Suvarna News Asianet Suvarna News

ಗ್ರಾಹಕರಿಗೆ ಅಚ್ಚರಿ; ಹೋಟೆಲ್‌ನಲ್ಲಿ ರೋಬೋ ಸಪ್ಲೈಯರ್‌!

ಶಿವಮೊಗ್ಗ ಹೋಟೆಲ್‌ನಲ್ಲಿ ರೋಬೋ ಸಪ್ಲೈಯರ್‌! ರಾಜ್ಯದಲ್ಲೇ ಮೊದಲ ಬಾರಿಗೆ ನಿಯೋಜನೆ | ರೋಬೋ ನೋಡಲು ಜನರ ದಾಂಗುಡಿ | ಭಾರಿ ಜನರ ಕಂಡು ಸೇವೆ ಸ್ಥಗಿತಗೊಳಿಸಿದ ಮಾಲೀಕ

Robot supplier in Shivamogga hotel
Author
Bengaluru, First Published May 9, 2019, 9:01 AM IST

ಶಿವಮೊಗ್ಗ (ಮೇ. 09): ಶಿವಮೊಗ್ಗ ನಗರದ ವಿನೋಬ ನಗರ ಪೊಲೀಸ್‌ ಚೌಕಿ ಸಮೀಪವಿರುವ ‘ಉಪಹಾರ ದರ್ಶಿನಿ’ಯಲ್ಲಿ ಬುಧವಾರ ಬೆಳಗ್ಗೆ ತಿಂಡಿ ತಿನ್ನಲೆಂದು ಬಂದವರಿಗೆ ಆಶ್ಚರ್ಯ ಕಾದಿತ್ತು. ತಮಗೆ ಬೇಕಾದ ತಿಂಡಿ ಆರ್ಡರ್‌ ಮಾಡಿ ಕೂತ ಕೆಲವೇ ಹೊತ್ತಿನಲ್ಲಿ ಇಂಗ್ಲೀಷ್‌ನಲ್ಲಿ ಗುಡ್‌ಮಾರ್ನಿಂಗ್‌ ಹೇಳುತ್ತಾ ಬಂದ ಯುವತಿ ರೂಪದ ರೊಬೋಟ್‌ವೊಂದು ಟೇಬಲ್‌ ಬಳಿ ನಿಂತು, ‘ತೆಗೆದುಕೊಳ್ಳಿ’ ಎಂದಾಗ ಕ್ಷಣ ಕಾಲ ಗಾಬರಿ...

ಹೌದು. ಮೆಟ್ರೋಪಾಲಿಟನ್‌ ನಗರದ ಸ್ವರೂಪವನ್ನು ಮೈಗೂಡಿಸಿಕೊಳ್ಳುವತ್ತ ಸಾಗಿರುವ ಘಟ್ಟನಗರಿ ಶಿವಮೊಗ್ಗದ ಹೋಟೆಲ್‌ಗಳು ಇದೀಗ ಹೈಟೆಕ್‌ ಮಾದರಿಯತ್ತ ಹೊರಳುವ ಸೂಚನೆಯನ್ನು ನೀಡಿದ್ದು, ಇಲ್ಲಿನ ಉಪಹಾರ ದರ್ಶಿನಿ ತನ್ನ ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿ ರೊಬೋಟ್‌ ಅನ್ನು ನೇಮಿಸಿಕೊಂಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೊಬೋಟ್‌ ಕಾರ್ಯಾರಂಭ ಮಾಡಿದೆ ಎನ್ನುತ್ತಾರೆ ದರ್ಶಿನಿಯ ಮಾಲೀಕರು.

ರೊಬೋಟ್‌ ಸರ್ವ್ ಮಾಡುವ ಸುದ್ದಿ ಕೆಲವೇ ಹೊತ್ತಿನಲ್ಲಿ ಎಲ್ಲೆಡೆ ಹರಡಿದೆ. ರೊಬೋಟ್‌ ಕೆಲಸ ನೋಡಲೆಂದು, ತಿಂಡಿ ತರಿಸಿಕೊಳ್ಳಲೆಂದು ನೂರಾರು ಜನ ಹೋಟೆಲ್‌ನತ್ತ ಧಾವಿಸಿದ್ದಾರೆ. ಇದನ್ನು ನಿರೀಕ್ಷಿಸದೇ ಇದ್ದ ದರ್ಶಿನಿ ಮಾಲೀಕ ರಾಘವೇಂದ್ರ, ರೊಬೋಟ್‌ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು.

5.3 ಲಕ್ಷ ನೀಡಿ ಖರೀದಿ:

‘ಪ್ರಾಯೋಗಿಕವಾಗಿ ಬುಧವಾರ ಇದನ್ನು ಚಾಲನೆಗೊಳಿಸಿದ್ದೇವೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಇದನ್ನು ಸೇವೆಗೆ ನಿಯೋಜಿಸಲಾಗುವುದು. .5.30 ಲಕ್ಷ ನೀಡಿ ಸ್ನೇಹಿತರ ಮೂಲಕ ಈ ರೊಬೋಟ್‌ ತರಿಸಿದ್ದು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೋಟೆಲ್‌ ಒಂದರಲ್ಲಿ ಈ ರೀತಿಯ ರೊಬೋಟ್‌ ಅಳವಡಿಸಲಾಗಿದೆ. ಮಧ್ಯಾಹ್ನ 12ರಿಂದ ಸಂಜೆ 4 ಗಂಟೆ ಮತ್ತು ರಾತ್ರಿ 7ರಿಂದ 10 ಗಂಟೆವರೆಗೆ ರೊಬೋಟ್‌ ಸರ್ವೀಸ್‌ ಇರುತ್ತದೆ’ ಎನ್ನುತ್ತಾರೆ ರಾಘವೇಂದ್ರ.

ಎರಡು ವರ್ಷಗಳ ಹಿಂದೆ ಆರಂಭಗೊಂಡ ಉಪಹಾರ ದರ್ಶಿನಿಯ ಮೊದಲ ಮಹಡಿಯಲ್ಲಿ ಉತ್ತರ ಭಾರತೀಯ ತಿಂಡಿಯ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಮಾತ್ರ ಈ ರೊಬೋಟ್‌ ಕಾರ್ಯ ನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಗ್ರಾಹಕರಿಗೆ ಬೇಕಾದ ತಿಂಡಿಯ ಆರ್ಡರ್‌ ಪಡೆದು ಕೌಂಟರ್‌ಗೆ ಕೊಟ್ಟಬಳಿಕ ತಿಂಡಿಯನ್ನು ಸಿದ್ಧಗೊಳಿಸಿ ರೊಬೋಟ್‌ ಕೈಯಲ್ಲಿ ಇರುವ ತಟ್ಟೆಯ ಮೇಲೆ ಇಡಲಾಗುತ್ತದೆ. ಬಳಿಕ ನಿರ್ದಿಷ್ಟಟೇಬಲ್‌ ಸಂಖ್ಯೆಯನ್ನು ಒತ್ತಿದಾಗ ರೊಬೋಟ್‌ ಆ ಟೇಬಲ್‌ ಬಳಿಗೆ ಹೋಗಿ, ಗ್ರಾಹಕರಿಗೆ ಶುಭ ಕೋರುತ್ತಾ, ತೆಗೆದುಕೊಳ್ಳುವಂತೆ ವಿನಂತಿಸುತ್ತದೆ. ಇದರ ಸಂಪೂರ್ಣ ನಿಯಂತ್ರಣ ನಿಯಂತ್ರಕರ ಕೈಯಲ್ಲಿ ಇರುತ್ತದೆ.

ರೋಬೋ ಕೆಲಸ ಹೇಗೆ?

- ತಿಂಡಿಯನ್ನು ಸಿದ್ಧಗೊಳಿಸಿ ರೊಬೋಟ್‌ ಕೈಯಲ್ಲಿ ಇರುವ ತಟ್ಟೆಯ ಮೇಲೆ ಇಡಲಾಗುತ್ತದೆ

- ಟೇಬಲ್‌ ಸಂಖ್ಯೆಯನ್ನು ರೊಬೋಟ್‌ನಲ್ಲಿರುವ ಗುಂಡಿಯ ಮೂಲಕ ನಮೂದಿಸಲಾಗುತ್ತದೆ

- ಕರಾರುವಾಕ್ಕಾಗಿ ನಿಗದಿತ ಟೇಬಲ್‌ ಬಳಿಗೆ ಹೋಗುವ ರೋಬೋ ಗ್ರಾಹಕರಿಗೆ ಶುಭ ಕೋರುತ್ತದೆ

- ಆಹಾರ ತೆಗೆದುಕೊಳ್ಳುವಂತೆ ವಿನಂತಿಸುತ್ತದೆ, ಇದರ ನಿಯಂತ್ರಣ ನಿಯಂತ್ರಕರ ಕೈಯಲ್ಲಿರುತ್ತದೆ

- ಈ ರೊಬೋಟ್‌ ಸರ್ವರ್‌ಗೆ 5.30 ಲಕ್ಷ ರು. ಬೆಲೆ ಎಂದು ಹೋಟೆಲ್‌ ಮಾಲೀಕರು ತಿಳಿಸಿದ್ದಾರೆ
 

Follow Us:
Download App:
  • android
  • ios