ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ದೆಹಲಿಯ ಕೋರ್ಟ್ ವೊಂದರಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. 

ರಾಬರ್ಟ್ ವಾದ್ರಾ ಅವರಿಗೆ ಸಂಬಂಧಿತ ಕಂಪನಿ ಲಂಡನ್‌ನ ಬ್ರಿಯಾನ್ಟನ್ ಸ್ಕ್ವೇರ್‌ನಲ್ಲಿ 17 ಕೋಟಿ ರು. ಮೊತ್ತದ ಆಸ್ತಿ ಖರೀದಿ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಜ. 7 ರಂದು ಹೊಸ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ್ರಾ ಆಪ್ತ ಮನೋಜ್ ಅರೋರಾ ಫೆ. 6 ರ ವರೆಗೆ ಮಧ್ಯಂತರ ಜಾಮೀನು  ಪಡೆದುಕೊಂಡಿದ್ದಾರೆ. ವಾದ್ರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಶನಿವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ವಿರುದ್ಧ ಆದಾಯ ತೆರಿಗೆ ಇಲಾಖೆ ನೂತನವಾಗಿ ಜಾರಿಯಾಗಿರುವ ಕಪ್ಪು ಹಣ ಕಾಯ್ದೆ ಹಾಗೂ ತೆರಿಗೆ  ಕಾನೂನಿನ ಅಡಿ ತನಿಖೆ ಕೈಗೊಂಡಿದ್ದ ವೇಳೆ ವಾದ್ರಾ ಆಪ್ತ ವರೋರಾ ಭಾಗಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತ್ತು. ವಾದ್ರಾ ಒಡೆತನದ ಕಂಪನಿಯೊಂದು 17 ಕೋಟಿ ರು.ಗೆ ಲಂಡನ್‌ನಲ್ಲಿ ಆಸ್ತಿಯನ್ನು ಖರಿದಿಸಿ  ಬಳಿಕ ಅದನ್ನು 2010 ರಲ್ಲಿ ಅದೇ ದರಕ್ಕೆ ಮಾರಾಟ ಮಾಡಿದೆ. ಈ ಕಟ್ಟಡದಲ್ಲಿ 61 ಲಕ್ಷ ರು. ನವೀಕರಣ ನಡೆಸಿದ್ದರೂ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.