ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾವ ರಾಬರ್ಟ್‌ ವಾದ್ರಾ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ವಿದೇಶ ಪ್ರವಾಸ ಕೈಗೊಳ್ಳಲು ದೆಹಲಿಯ ನ್ಯಾಯಾಲಯವೊಂದು ಅನುಮತಿ ನೀಡಿದೆ. 

ಅಮೆರಿಕ ಹಾಗೂ ನೆದರ್ಲೆಂಡ್‌ ದೇಶಗಳಿಗೆ 6 ವಾರ ಭೇಟಿ ನೀಡಲು ನ್ಯಾಯಾಲಯ ಸಮ್ಮತಿಸಿದೆ. ಆದರೆ ಬ್ರಿಟನ್‌ಗೆ ತೆರಳದಂತೆ ನಿರ್ಬಂಧ ಹೇರಿದೆ. ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ವಾದ್ರಾ 25 ಲಕ್ಷ ರು. ಬ್ಯಾಂಕ್‌ ಖಾತ್ರಿ ಒದಗಿಸಬೇಕು. 

ಭಾರತಕ್ಕೆ ಮರಳಿದ 24 ತಾಸುಗಳಲ್ಲಿ ಆ ಕುರಿತು ಮಾಹಿತಿ ನೀಡಬೇಕು ಎಂದು ವಿಶೇಷ ನ್ಯಾಯಲಯ ಸೂಚಿಸಿದೆ. ತಮ್ಮ ದೊಡ್ಡ ಕರಳಿನಲ್ಲಿ ಸಣ್ಣ ಗಡ್ಡೆ ಇರುವ ಕಾರಣ ಚಿಕಿತ್ಸೆ ಪಡೆಯಲು ಬ್ರಿಟನ್‌ ಅಥವಾ ಇನ್ನಿತರೆ ದೇಶಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ವಾದ್ರಾ ಅರ್ಜಿ ಸಲ್ಲಿಸಿದ್ದರು. ಬ್ರಿಟನ್‌ನಲ್ಲಿ ಬಂಗಲೆ ಖರೀದಿಸಿರುವ ಪ್ರಕರಣ ಇರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ತೆರಳದಂತೆ ನ್ಯಾಯಾಲಯ ಸೂಚಿಸಿದೆ.