Asianet Suvarna News Asianet Suvarna News

ಬ್ರಿಗೇಡ್‌ ಜಂಗೀಕುಸ್ತಿ: ಈಶ್ವರಪ್ಪ v/s ಬಿಎಸ್‌ವೈ

ಯಾವುದೇ ಕಾರಣಕ್ಕೂ ಬ್ರಿಗೇಡ್‌ನ ಸಭೆಯಲ್ಲಿ ಪಾಲ್ಗೊಳ್ಳದಂತೆ ಈಶ್ವರಪ್ಪ ಅವರನ್ನು ತಡೆಯಬೇಕು ಎಂದು ಯಡಿಯೂರಪ್ಪ ಅವರು ಪಕ್ಷದ ವರಿಷ್ಠರ ಬಳಿ ಪಟ್ಟು ಹಿಡಿದಿದ್ದರೆ, ಸಭೆಗೆ ಹೋಗದಂತೆ ತನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಶ್ವರಪ್ಪ ಗುಡುಗಿದ್ದಾರೆ. ಹೀಗಾಗಿ ಈ ಜಂಗೀಕುಸ್ತಿಯಲ್ಲಿ ಯಾರಿಗೆ ಗೆಲುವು ಸಿಗಲಿದೆ, ಯಾರು ಸೋಲು ಅನುಭವಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, 8ರ ನಂತರ ಬಿಜೆಪಿಯಲ್ಲಿ ಪ್ರಮುಖ ಬೆಳವಣಿಗೆಗಳು ಜರಗುವ ಲಕ್ಷಣಗಳಿವೆ.

Rift in BJP widens as Eshwarappa is determined to continue Brigade
  • Facebook
  • Twitter
  • Whatsapp

ಇದೇ ತಿಂಗಳ 8ರಂದು ರಾಯಚೂರಿನಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ರಾಜ್ಯ ಮಟ್ಟದ ಸಭೆ ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಬ್ರಿಗೇಡ್‌ನ ಜನ್ಮದಾತರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನಡುವಿನ ಜಂಗೀಕುಸ್ತಿಗೆ ವೇದಿಕೆಯಾಗಿದೆ.

ಯಾವುದೇ ಕಾರಣಕ್ಕೂ ಬ್ರಿಗೇಡ್‌ನ ಸಭೆಯಲ್ಲಿ ಪಾಲ್ಗೊಳ್ಳದಂತೆ ಈಶ್ವರಪ್ಪ ಅವರನ್ನು ತಡೆಯಬೇಕು ಎಂದು ಯಡಿಯೂರಪ್ಪ ಅವರು ಪಕ್ಷದ ವರಿಷ್ಠರ ಬಳಿ ಪಟ್ಟು ಹಿಡಿದಿದ್ದರೆ, ಸಭೆಗೆ ಹೋಗದಂತೆ ತನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಶ್ವರಪ್ಪ ಗುಡುಗಿದ್ದಾರೆ.

ಹೀಗಾಗಿ ಈ ಜಂಗೀಕುಸ್ತಿಯಲ್ಲಿ ಯಾರಿಗೆ ಗೆಲುವು ಸಿಗಲಿದೆ, ಯಾರು ಸೋಲು ಅನುಭವಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, 8ರ ನಂತರ ಬಿಜೆಪಿಯಲ್ಲಿ ಪ್ರಮುಖ ಬೆಳವಣಿಗೆಗಳು ಜರಗುವ ಲಕ್ಷಣಗಳಿವೆ.

ಪಟ್ಟು-ಪ್ರತಿಪಟ್ಟು: ಒಂದು ವೇಳೆ ಈ ಸಭೆಯಲ್ಲಿ ಈಶ್ವರಪ್ಪ ಅವರು ಭಾಗಿಯಾದಲ್ಲಿ ತಕ್ಷಣವೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಬಿಗಿಪಟ್ಟನ್ನು ಯಡಿಯೂರಪ್ಪ ಅವರು ವರಿಷ್ಠರ ಮುಂದಿಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಯಾವುದೇ ಕಾರಣಕ್ಕೂ ಬ್ರಿಗೇಡ್‌ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಯಚೂರಿನ ಸಭೆಯಲ್ಲಿ ನಿಶ್ಚಿತವಾಗಿಯೂ ಪಾಲ್ಗೊಳ್ಳುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಬ್ರಿಗೇಡ್‌ ಮುಂದುವರೆಸುವಂತೆ ಹೇಳಿದ ಮೇಲೆ ಬೇರೆಯವರ ಮಾತಿಗೆ ಬೆಲೆಯಿಲ್ಲ ಎಂದು ಹೇಳಿದ್ದಾರೆ.

‘ನನಗೆ ಅಮಿತ್‌ ಶಾ ಹೇಳಿದ್ದು ಮುಖ್ಯವೇ ಹೊರತು ಇತರರಲ್ಲ. ಹೀಗಾಗಿ, ನಾನು 8ರ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಅದು ಬ್ರಿಗೇಡ್‌ನ ಪದಾಧಿಕಾರಿಗಳ ಅಭ್ಯಾಸ ವರ್ಗ. ಪ್ರತಿ ತಾಲೂಕಿನಿಂದ ಐವರು ಪಾಲ್ಗೊಳ್ಳುತ್ತಾರೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡಿಸಿರುವ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿ ಸಹಕರಿಸಬೇಕು ಎಂಬ ಒತ್ತಾಯವನ್ನೂ ಮಾಡಲಾಗುವುದು' ಎಂದಿದ್ದಾರೆ.

ದೊಡ್ಡ ಹೊಡೆತ ಭೀತಿ: ಇದುವರೆಗೆ ನಡೆದಿರುವ ಬೆಳವಣಿಗೆಗಳು ಒಂದು ಹಂತದ್ದು. ಇನ್ನು ಮುಂದೆಯೂ ಇದೇ ರೀತಿ ನಡೆದಲ್ಲಿ ಪಕ್ಷದ ಸಂಘಟನೆಗೆ ದೊಡ್ಡ ಹೊಡೆದ ಬೀಳಲಿದೆ. ಯಾವುದೇ ಕಾರಣಕ್ಕೂ ಈಶ್ವರಪ್ಪ ಅವರಿಗೆ ಬ್ರಿಗೇಡ್‌ನಲ್ಲಿ ಮುಂದುವರೆಯದಂತೆ ಕಡಿವಾಣ ಹಾಕಬೇಕು. ಪಕ್ಷ ಅಥವಾ ಬ್ರಿಗೇಡ್‌ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಬ್ರಿಗೇಡ್‌ನಿಂದ ಪಕ್ಷದ ಸಂಘಟನೆಗೆ ಯಾವುದೇ ರೀತಿಯಲ್ಲೂ ಸಹಾಯವಾಗುವುದಿಲ್ಲ ಎಂಬ ಅಂಶವನ್ನು ಯಡಿಯೂರಪ್ಪ ಅವರು ಪಕ್ಷದ ರಾಜ್ಯ ಉಸ್ತುವಾರಿ ಪಿ.ಮುರಳೀಧರ ರಾವ್‌ ಮೂಲಕ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

8ರಂದು ರಾಯಚೂರಿನಲ್ಲಿ ಬ್ರಿಗೇಡ್‌ನ ಸಭೆಯಲ್ಲಿ ಈಶ್ವರಪ್ಪ ಅವರು ಪಾಲ್ಗೊಂಡಲ್ಲಿ, ಮರುಕ್ಷಣವೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಹಾಗೆ ಮಾಡಿದಲ್ಲಿ ಮಾತ್ರ ಪಕ್ಷದ ಭಿನ್ನಮತೀಯ ಮುಖಂಡರಿಗೆ ಸ್ಪಷ್ಟಸಂದೇಶ ರವಾನಿಸಿದಂತಾಗುತ್ತದೆ. ಇಲ್ಲದಿದ್ದರೆ ಪಕ್ಷ ಕವಲು ದಾರಿಯಲ್ಲಿ ಸಾಗಿದಂತಾಗುತ್ತದೆ. ಇದರ ಲಾಭವನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಪಡೆಯಲಿವೆ ಎಂದೂ ಯಡಿಯೂರಪ್ಪ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಹಲವು ತಿಂಗಳುಗಳಿಂದ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಪಕ್ಷದ ಪದಾಧಿಕಾರಿಗಳ ನೇಮಕ ಕುರಿತ ಅಸಮಾಧಾನದ ಬೆನ್ನಲ್ಲೇ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿ ಸೆಡ್ಡು ಹೊಡೆದಿದ್ದರು. ನಂತರದ ದಿನಗಳಲ್ಲಿ ಯಡಿಯೂರಪ್ಪ ಅವರು ಏನೆಲ್ಲ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದೆ ಬ್ರಿಗೇಡ್‌ ಮುಂದುವರೆಸಿಕೊಂಡು ಬಂದಿದ್ದಾರೆ.

ಈ ಸಂಬಂಧ ಗುರುವಾರ ‘ಕನ್ನಡಪ್ರಭ'ದೊಂದಿಗೆ ಮಾತನಾಡಿದ ಈಶ್ವರಪ್ಪ, ಕಳೆದ ಜ.27ರಂದು ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಇನ್ನು ಮುಂದೆ ಬ್ರಿಗೇಡ್‌ ಸಂಘಟನೆಯನ್ನು ರಾಜಕೀಯ ಚಟುವಟಿಕೆಗಳಿಂದ ದೂರ ಇಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆ ಪ್ರಕಾರ, ನಂತರದ ದಿನಗಳಲ್ಲಿ ಬ್ರಿಗೇಡ್‌ ಸಂಘಟನೆಯನ್ನು ರಾಜಕೀಯ ಚಟುವಟಿಕೆಗಳಿಂದ ದೂರ ಇರಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತಗೊಳಿಸಿ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಸ್ವತಃ ಅಮಿತ್‌ ಶಾ ಅವರ ಸೂಚನೆಯಂತೆ ಬ್ರಿಗೇಡ್‌ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios