ರಾಜ್ಯದ ಬಹುಪಾಲು ಜನರ ಬಹುಮುಖ್ಯ ಆಹಾರವಾಗಿ ರುವ ಅಕ್ಕಿಯ ದರ ಜುಲೈ 1ರಿಂದ ಸುಮಾರು 3 ರಿಂದ 5 ರು.ಗಳಷ್ಟುದುಬಾರಿಯಾಗುವ ಸಾಧ್ಯತೆಯಿದೆ! ಹೀಗೆ ಎಲ್ಲರ ತುತ್ತಿನ ಚೀಲದ ಮೂಲ ಆಹಾರ ವಾದ ಅಕ್ಕಿ ದುಬಾರಿಯಾಗಲು ಕಾರಣ ಜಿಎಸ್‌ಟಿ

ನವದೆಹಲಿ(ಜೂ.18): ರಾಜ್ಯದ ಬಹುಪಾಲು ಜನರ ಬಹುಮುಖ್ಯ ಆಹಾರವಾಗಿ ರುವ ಅಕ್ಕಿಯ ದರ ಜುಲೈ 1ರಿಂದ ಸುಮಾರು 3 ರಿಂದ 5 ರು.ಗಳಷ್ಟುದುಬಾರಿಯಾಗುವ ಸಾಧ್ಯತೆಯಿದೆ! ಹೀಗೆ ಎಲ್ಲರ ತುತ್ತಿನ ಚೀಲದ ಮೂಲ ಆಹಾರ ವಾದ ಅಕ್ಕಿ ದುಬಾರಿಯಾಗಲು ಕಾರಣ ಜಿಎಸ್‌ಟಿ.

ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ 2017ರ ಸರಕು ಹಾಗೂ ಸೇವೆ ತೆರಿಗೆಗಳ ಕಾಯ್ದೆ (ಜೆಎಸ್‌ಟಿ) ಅಡಿಯಲ್ಲಿ ಪ್ಯಾಕ್‌ ಮಾಡಿದ ಬ್ರಾಂಡ್‌ ಹಾಗೂ ಟ್ರೇಡ್‌ ಮಾರ್ಕ್ ಅಕ್ಕಿಯ ಮೇಲೆ ಶೇ.5ರಷ್ಟುತೆರಿಗೆ ವಿಧಿಸಲಾಗುತ್ತಿದೆ. ಈಗಾಗಲೇ ಈ ಕಾಯ್ದೆ ಸಂಸತ್ತು ಮತ್ತು ರಾಜ್ಯದ ವಿಧಾನ ಮಂಡಲದಲ್ಲಿ ಅಂಗೀಕಾರಗೊಂಡಿದ್ದು, ಜುಲೈ 1ರಿಂದ ತೆರಿಗೆ ಅನ್ವಯ ಆಗಲಿದೆ. ಇದರ ಜತೆಗೆ ಕರ್ನಾಟಕ ಮಾರಾಟ ತೆರಿಗೆ ಕಾಯ್ದೆಯಡಿ ಅಕ್ಕಿ ಮಾರಾಟದ ಮೇಲೆ ಶೇ.1.50ರಷ್ಟುಮಾರಾಟ ಶುಲ್ಕ ವಿಧಿಸಲಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆ ಸೇರಿ ಪ್ರತಿ ಕೇಜಿ ಅಕ್ಕಿಯ ಮೇಲೆ ಒಟ್ಟಾರೆ ಶೇ.6.50 ತೆರಿಗೆ ಬೀಳಲಿದೆ. ಇದರಿಂದ ಸಹಜವಾಗಿಯೇ ಎಲ್ಲ ದರ್ಜೆಯ ಅಕ್ಕಿಯ ದರ ಶೇ.6.50ರಷ್ಟುಹೆಚ್ಚಳವಾಗಲಿದೆ ಎಂದು ಕರ್ನಾಟಕ ಸ್ಟೇಟ್‌ ರೈಸ್‌ ಮಿಲ್ಲರ್ಸ್‌ ಅಸೋಸಿಯೇಶನ್‌ ಜಂಟಿ ಕಾರ್ಯದರ್ಶಿ ಕೆ.ಜಿ. ನಾಗರಾಜ್‌ ಹೇಳಿದ್ದಾರೆ.

ದೇಶದಲ್ಲಿ ಅಕ್ಕಿ ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಛತ್ತಿಸ್‌ಗಢ, ಪಂಜಾಬ್‌ ಮತ್ತು ಕರ್ನಾಟಕದಲ್ಲಿ ಜಿಎಸ್‌ಟಿಯಿಂದ ಇದೇ ಮೊದಲ ಬಾರಿಗೆ ಅಕ್ಕಿ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕವೂ ಸೇರಿ ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಈವರೆಗೆ ಶೇ.1.50ರಷ್ಟುಮಾರಾಟ ಶುಲ್ಕ ಹೊರತುಪಡಿಸಿ, ಯಾವುದೇ ರೀತಿಯ ತೆರಿಗೆ ವಿಧಿಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಪ್ಯಾಕೆಟ್‌ನಲ್ಲಿ ಮಾರಾಟ ಮಾಡುವ ಅಕ್ಕಿಯ ಮೇಲೆ ಶೇ.5ರಷ್ಟುಜಿಎಸ್‌ಟಿ ವಿಧಿಸಲಾಗಿದೆ.


ಹೇಗೆ ಪರಿಣಾಮ ಬೀರಲಿದೆ?: ರೈತರಿಂದ ಭತ್ತ ಖರೀದಿಸುವ ರೈಸ್‌ ಮಿಲ್‌ಗಳು ಅಕ್ಕಿಯಾಗಿ ಪರಿವರ್ತಿಸಿ ತಮ್ಮದೇ ಬ್ರಾಂಡ್‌ಗಳ ಮೂಲಕ ಮಾರಾಟ ಮಾಡುತ್ತವೆ. ಕರ್ನಾಟಕದಲ್ಲಿ ಸುಮಾರು 900 ವಿವಿಧ ಹೆಸರಿನ ಅಕ್ಕಿಯಿದೆ. ಈ ಪೈಕಿ 500 ಬ್ರಾಂಡ್‌ಗಳು ಹಾಗೂ ಸುಮಾರು 400 ಟ್ರೇಡ್‌ಮಾರ್ಕ್ಗಳುಳ್ಳ ಅಕ್ಕಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಎಲ್ಲ ಬ್ರಾಂಡ್‌ ಮತ್ತು ಟ್ರೇಡ್‌ ಮಾರ್ಕ್ಗಳ ಅಕ್ಕಿಯ ಮೇಲೆ ಇನ್ನು ಮುಂದೆ ಒಟ್ಟಾರೆ ಶೇ.6.50ರಷ್ಟುತೆರಿಗೆ ಅನ್ವಯವಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕನಿಷ್ಠ 28 ರು.ಗಳಿಂದ 62 ರು.ವರೆಗೆ ಸೋನಾ ಮಸೂರಿ, ಸ್ಟೀಮ್‌್ಡ ಮತ್ತು ರಾ ರೈಸ್‌ ಮಾರಾಟ ಮಾಡಲಾಗುತ್ತಿದೆ. ಕೆಳಮಧ್ಯಮ ವರ್ಗದ ಜನರು ಕೆ.ಜಿ.ಗೆ 28 ರು.ಗಳಿಂದ 40 ರು. ಗಳವರೆಗಿನ ವಿವಿಧ ಬ್ರಾಂಡ್‌ಗಳ ಅಕ್ಕಿಯನ್ನು ಬಳಸುತ್ತಿದ್ದರೆ, ಮಧ್ಯಮ ಹಾಗೂ ಶ್ರೀಮಂತ ವರ್ಗದ ಜನರು 52ರಿಂದ 62 ರು.ಗಳವರೆಗಿನ ವಿವಿಧ ಬ್ರಾಂಡ್‌ಗಳ ಅಕ್ಕಿ ಬಳಸುತ್ತಿದ್ದಾರೆ.

ಇನ್ನು ಬಿರಾರ‍ಯನಿ ಮತ್ತಿತರ ಆಹಾರ ಪದಾರ್ಥಗಳಿಗೆ ಬಳಸುವ ಬಾಸ್ಮತಿ ಅಕ್ಕಿ ದರ 80 ರು.ಗಳಿಂದ 180 ರು.ಗಳವರೆಗೆ ಇದೆ. ಈ ಎಲ್ಲ ಹಂತದ ಅಕ್ಕಿಯ ಮೇಲೆ ಶೇ.6.50ರಷ್ಟುತೆರಿಗೆ ವಿಧಿಸುವುದರಿಂದ ಪ್ರತಿ ಹಂತದಲ್ಲೂ ಕೆ.ಜಿ. ಅಕ್ಕಿ ಕನಿಷ್ಠ 5 ರು.ಗಳಷ್ಟುದುಬಾರಿಯಾಗಲಿದೆ.

ರೈತರ ಆದಾಯಕ್ಕೂ ಕತ್ತರಿ: ಅಕ್ಕಿಯ ಮೇಲೆ ಜಿಎಸ್‌ಟಿ ಹೇರುವ ಕಾರಣದಿಂದ ರೈಸ್‌ ಮಿಲ್‌ ಮಾಲಿಕರು ಭತ್ತ ಬೆಳೆಯುವ ರೈತರ ಮೇಲೂ ತೆರಿಗೆ ಭಾರವನ್ನು ವರ್ಗಾಹಿಸುವ ಸಂಭವನೀ ಯತೆಯೂ ಇದೆ. 

ರಾಜ್ಯದಲ್ಲಿ ವಿವಿಧ ಗುಣಮಟ್ಟದ ಭತ್ತವನ್ನು ಕ್ರಮವಾಗಿ ಕ್ವಿಂಟಲ್‌ಗೆ ಸರಾಸರಿ . 1,800, . 2,800 ಹಾಗೂ . 3,200ಗಳಿಗೆ ಖರೀದಿಸುತ್ತಿದ್ದಾರೆ. ಇನ್ನು ಅಕ್ಕಿಯ ಶೇ.6.50ರಷ್ಟುತೆರಿಗೆ ಭಾರ ಬಿದ್ದರೆ ಅದೇ ನೆಪವನ್ನು ಮುಂದು ಮಾಡಿ ರೈತರಿಗೆ ನೀಡುವ ಹಣದಲ್ಲಿ ಕೊಂಚ ಪ್ರಮಾಣದ ಮೊತ್ತವನ್ನು ಕಡಿತಗೊಳಿಸುವ ಪ್ರಯತ್ನ ನಡೆಸಲು ರೈಸ್‌ ಮಿಲ್‌ ಮಾಲಿಕರು ನಡೆಸುವ ಸಾಧ್ಯತೆಯಿದೆ.
ಕಾಳಸಂತೆಗೆ ದಾರಿ?: ಇದೇ ಮೊದಲ ಬಾರಿ ಅಕ್ಕಿ ಮೇಲೆ ತೆರಿಗೆ ಹೇರುತ್ತಿರುವ ಪರಿಣಾಮ ಸರ್ಕಾರದ ವಿವಿಧ ಯೋಜನೆಯಡಿ ಕಡಿಮೆ ದರದಲ್ಲಿ ನೀಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಪ್ರಮಾಣ ಹೆಚ್ಚಾಗುವ ಆತಂಕವೂ ಇದರಿಂದ ನಿರ್ಮಾಣವಾಗಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿದ ದರ ಹೆಚ್ಚಳವಾದರೆ ಕಡಿಮೆ ಬೆಲೆಗೆ ಸಿಗುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುಕಟ್ಟೆಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬಹುದು. ಇನ್ನು ರೈಸ್‌ ಮಿಲ್‌ಗಳು ಕೂಡ ತೆರಿಗೆ ತಪ್ಪಿಸಲು ಬ್ರಾಂಡ್‌ ಇಲ್ಲದೇ ಕಳಪೆ ಗುಣಮಟ್ಟದ ಅಕ್ಕಿ ಮಾರಾಟದಂತಹ ಅಕ್ರಮ ದಾರಿಗಳನ್ನು ತುಳಿಯಬಹುದು.

ರಾಜ್ಯ ಸರ್ಕಾರ ಅಸಹಾಯಕ: ಜಿಎಸ್‌ಟಿ ವ್ಯಾಪ್ತಿಗೆ ಅಕ್ಕಿ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸ್ಟೇಟ್‌ ರೈಸ್‌ ಮಿಲ್ಲರ್ಸ್‌ ಅಸೋಸಿಯೇಶನ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಜಿಎಸ್‌ಟಿಯಿಂದ ಅಕ್ಕಿ ವಹಿವಾಟಿನ ಮೇಲೆ ಆಗುವ ಪರಿಣಾಮವನ್ನು ವಿವರಿಸಿದೆ. ಆದರೆ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಅಸಹಾಯಕವಾಗಿದೆ ಎಂದು ಅವರು ವಿವರಿಸಿದ್ದಾರೆ.
ಹೀಗಾಗಿ ರಾಜ್ಯದ ರೈಸ್‌ ಮಿಲ್ಲರ್ಸ್‌ ಅಸೋಸಿಯೇಶನ್‌ ದೇಶದ ಇತರ ರಾಜ್ಯಗಳ ರೈಸ್‌ ಮಿಲ್ಲರ್‌ಗಳ ಜತೆ ಸೇರಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೇರಿದಂತೆ ಅನೇಕ ಸಚಿವರನ್ನು ಭೇಟಿ ಮಾಡಿ, ಜಿಎಸ್‌ಟಿಯಿಂದ ಅಕ್ಕಿ ವಹಿವಾಟಿನ ಮೇಲೆ ಆಗುವ ಪರಿಣಾಮಗಳ ಕುರಿತಂತೆ ಮನವರಿಕೆ ಮಾಡುವ ಪ್ರಯತ್ನ ಮಾಡಿದೆ. ಆದರೆ ಕೇಂದ್ರ ಸರ್ಕಾರ ಜಿಎಸ್‌ಟಿ ವ್ಯಾಪ್ತಿಯಿಂದ ಅಕ್ಕಿಯನ್ನು ಹೊರಗಿಡಲು ಮನಸ್ಸು ಮಾಡುತ್ತಿಲ್ಲ.