ಬೆಂಗಳೂರು, [ಆ.28]: ಉಪಮುಖ್ಯಮಂತ್ರಿ ಹುದ್ದೆ ಸಿಕ್ಕಿಲ್ಲವೆಂದ  ಒಳಗೊಳಗೆ ನೊಂದುಕೊಂಡಿರುವ ಸಚಿವ ಆರ್. ಅಶೋಕ್, ಬೆಂಗಳೂರಿನಲ್ಲಿ ರಾಜಕೀಯ ಪ್ರಬಲ್ಯ ಸಾಧಿಸಲು ಸರ್ಕಸ್ ಶುರು ಮಾಡಿದ್ದಾರೆ.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ವಿರುದ್ಧ ಮೇಲುಗೈ ಸಾಧಿಸಲು ತಂತ್ರ ರೂಪಿಸಿರುವ ಅಶೋಕ್, ಶತಾಯಗತಾಯ ಬೆಂಗಳೂರು ಉಸ್ತುವಾರಿ ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಒಂದೇ ಕಾರ್ಯಕ್ರಮದಲ್ಲಿ ಸಿಎಂ- ಅಶೋಕ್; ಆದರೆ...

ಪಕ್ಷದೊಳಗಿನ ಪ್ರಮುಖ ನಾಯಕರ ಮೂಲಕ ಬೆಂಗಳೂರು ಉಸ್ತುವಾರಿಯನ್ನು ತಮಗೆ ಕೊಡಿಸುವಂತೆ ಅಶೋಕ್ ಲಾಬಿ ನಡೆಸಿದ್ದಾರೆ. ಖುದ್ದು ಅಶೋಕ್ ಮಂಗಳವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಬೆಂಗಳೂರು ಉಸ್ತುವಾರಿಯನ್ನು ತಮಗೆ ನೀಡುವಂತೆ ಚರ್ಚೆ ಮಾಡಿದ್ದಾರೆ.

ರಾಜಕೀಯ ಏರಿಳಿತದಲ್ಲಿ ಡಿಸಿಎಂ ಹುದ್ದೆ ಸಿಗಲಿಲ್ಲ ಎನ್ನುವ ಬೇಸರ ನನಗಿಲ್ಲ. ಆದ್ರೆ ಬೆಂಗಳೂರು ಉಸ್ತುವಾರಿಯನ್ನು ತಮಗೆ ನೀಡುವಂತೆ ಬಿಎಸ್ ವೈ ಬಳಿ  ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಎಲ್ಲಾ ಒಳ್ಳೆಯದಾಗುತ್ತೇ ಹೋಗಿ ಎಂದು ಯಡಿಯೂರಪ್ಪ ಸಹ ಭರವಸೆ ಕೊಟ್ಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.  

ಈಗಾಗಲೇ ಡಿಸಿಎಂ ಹುದ್ದೆ ಪಡೆದುಕೊಂಡಿರುವ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಅವರಿಗೆ ಬೆಂಗಳೂರು ಉಸ್ತುವಾರಿ ಸಿಕ್ಕರೆ ಬೆಂಗಳೂರಿನಲ್ಲಿ ತಮ್ಮ ವರ್ಚಸ್ಸು ಕಡಿಮೆಯಾಗಲಿದೆ ಎನ್ನುವ ಲೆಕ್ಕಾಚಾರ ಅಶೋಕ್ ಅವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಬೆಂಗಳೂರು ಉಸ್ತುವಾರಿಯಾಗಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದಾರೆ.

ಅಶ್ವಥ್ ನಾರಾಯಣ ಮಾತ್ರವಲ್ಲದೇ ಬಿಎಸ್ ವೈ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮರ್ ಸಹ ರಾಜಾಜಿನಗರದ ಶಾಸಕರಾಗಿರುವ ಹಿನ್ನೆಲೆಯಲ್ಲಿ ಈ ಮೂವರಲ್ಲಿ ಯಾರಿಗೆ ಬೆಂಗಳೂರು ಉಸ್ತುವಾರಿ ಸಿಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ. 

ಮತ್ತೊಂದೆಡೆ ಚಿತ್ರದುರ್ಗ ಜಿಲ್ಲೆ ಮೊಣಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ನೀಡುವಂತೆ ಸಿಎಂ ಮುಂದೆ ಬೇಡಿಕೆ ಇಟ್ಟಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಸಚಿವ ಸ್ಥಾನ, ಖಾತೆಗೆ ಕಿತ್ತಾಡುತ್ತಿದ್ದ ಬಿಜೆಪಿ ನಾಯಕರಲ್ಲಿ ಈಗ ಉಸ್ತುವಾರಿಗಾಗಿ ಪೈಪೋಟಿ ಶುರುವಾಗಿದೆ.