ಬೆಂಗಳೂರು :  ರಾಜ್ಯದಲ್ಲೂ ದೆಹಲಿ ಮಾದರಿಯಲ್ಲೇ ಪಟಾಕಿಗೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಾಗಲಿದ್ದು, ಬೆಳಕಿನ ಹಬ್ಬ ದೀಪಾವಳಿಯ ನಾಲ್ಕು ದಿನಗಳ ಕಾಲ ಪ್ರತಿ ದಿನ 2 ಗಂಟೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಬಗ್ಗೆ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಒಪ್ಪಿಗೆ ದೊರೆ​ಯು​ವುದು ಬಾಕಿ​ಯಿ​ದೆ.

ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ ತಕ್ಷಣ ಪಟಾಕಿಗೆ ನಿಯಂತ್ರಣ ಹೇರಿ ಸರ್ಕಾರ ಸುತ್ತೋಲೆ ಹೊರಡಿಸಲಿದ್ದು, ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಬೇಕು. ಜತೆಗೆ ಸರ್ಕಾರ ನಿರ್ಬಂಧ ವಿಧಿಸಿದ ಸ್ಥಳದಲ್ಲಿ ಪಟಾಕಿ ಹೊಡೆಯಬಾರದು ಎಂಬ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಈ ಸಂಬಂಧ ನ.5ರಂದು ಸೋಮವಾರದಿಂದ ನ.8ರ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ಮಾತ್ರ ಪಟಾಕಿಗೆ ಅನುಮತಿ ನೀಡಲಾಗುವುದು. ಜತೆಗೆ ರಾತ್ರಿ ಎರಡು ಗಂಟೆಗಳ ಕಾಲ ಮಾತ್ರ ಅನುಮತಿ ನೀಡಲು ಸರ್ಕಾರ ಮುಂದಾಗಿದೆ.

ಜತೆಗೆ ಸುಪ್ರೀಂಕೋರ್ಟ್‌ ಸೂಚಿಸಿರುವಂತೆ ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟುಮಾಡದ ಪಟಾಕಿಗಳನ್ನು ಮಾತ್ರ ಸಿಡಿಸಲು ಅನುಮತಿ ನೀಡಬೇಕು. ಸೂಕ್ಷ್ಮ ಪ್ರದೇಶ, ಆಸ್ಪತ್ರೆ, ದೇವಸ್ಥಾನ ಮತ್ತಿತರ ನಿರ್ಬಂಧಿತ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ನಿಗಾ ವಹಿಸಬೇಕು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಮುಖ್ಯಮಂತ್ರಿಯವ​ರಿಗೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಪಟಾಕಿ ಮಾರಾಟಕ್ಕೆ ನಿರ್ಬಂಧವಿಲ್ಲ:

ಇದೇ ವೇಳೆ ಪಟಾಕಿ ಮಾರಾಟದ ಮೇಲೆ ಯಾವುದೇ ನಿಬಂರ್‍ಧವಿಲ್ಲ. ಆದರೆ ಪಟಾಕಿ ಮಾರಾಟಕ್ಕೆ ಕೆಲ ಷರತ್ತು ವಿಧಿಸಲಾಗುವುದು. ಕಡಿಮೆ ಮಾಲಿನ್ಯ ಉಂಟುಮಾಡುವ ಪಟಾಕಿಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಈ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ಸೂಚನೆಗಳನ್ನು ಪಾಲಿಸಿದ್ದೇವೆ. ಆದರೆ, ಸುಪ್ರೀಂಕೋರ್ಟ್‌ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ದಕ್ಷಿಣದ ರಾಜ್ಯಗಳಿಗೆ ಸೂಚಿಸಿಲ್ಲ. ಈ ನಡುವೆಯೂ ತಮಿಳುನಾಡು ಸರ್ಕಾರ ಬೆಳಗ್ಗೆ 6 ಗಂಟೆಯಿಂದ 7 ಗಂಟೆ ಹಾಗೂ ಸಂಜೆ 7 ಗಂಟೆಯಿಂದ 8 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ಪರಿಸರದ ಮೇಲಿನ ಕಾಳಜಿ ಹಾಗೂ ಸುಪ್ರೀಂಕೋರ್ಟ್‌ ಆದೇಶ ಪಾಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ನಿಯಂತ್ರಿತ ಪಟಾಕಿಗೆ ಮೊರೆ ಹೋಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸುಪ್ರೀಂಕೋರ್ಟ್‌ ಆದೇಶದಲ್ಲಿ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಆಚರಣೆಗೆ ಮಧ್ಯರಾತ್ರಿ 11.55 ರಿಂದ 12.30ವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ಈ ಬಗ್ಗೆ ಸದ್ಯಕ್ಕೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಸುಪ್ರೀಂಕೋರ್ಟ್‌ ಆದೇಶದಂತೆ ಪಟಾಕಿ ಸಿಡಿಸುವ ಬಗ್ಗೆ ಮಾರ್ಗಸೂಚಿ ರಚಿಸಿ ಮುಖ್ಯಮಂತ್ರಿಗಳ ಅನುಮೋದನೆಗೆ ಸಲ್ಲಿಸಿದ್ದೇವೆ. ನ.5ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

- ಟಿ.ಎಂ. ವಿಜಯಭಾಸ್ಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ