ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ ಸಂರಕ್ಷಣೆ ಕುರಿತು ನಿರ್ಲಕ್ಷ್ಯ ಪ್ರದರ್ಶಿಸಿರುವ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ಸುಪ್ರೀಂಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ ಸಂರಕ್ಷಣೆ ಕುರಿತು ನಿರ್ಲಕ್ಷ್ಯ ಪ್ರದರ್ಶಿಸಿರುವ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ಸುಪ್ರೀಂಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಾಜ್‌ಮಹಲ್‌ ಸಂರಕ್ಷಣೆಯ ದೃಷ್ಟಿಕೋನವುಳ್ಳ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾದ ಉತ್ತರ ಪ್ರದೇಶ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೋರ್ಟ್‌, ತಾಜ್‌ಮಹಲ್‌ ಅನ್ನು ‘ಒಂದೋ ಮುಚ್ಚಿ, ಉರುಳಿಸಿ ಇಲ್ಲವಾದಲ್ಲಿ ಸಂರಕ್ಷಿಸಿ’ ಎಂದು ಹೇಳಿದೆ.

ತಾಜ್‌ ಸಂರಕ್ಷಣೆಯ ಬಗ್ಗೆ ಸಂಸದೀಯ ಸಮಿತಿ ವರದಿಯಿದ್ದರೂ, ಆ ಪ್ರಕಾರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ನ್ಯಾ. ಎಂ.ಬಿ. ಲೋಕೂರ್‌ ನ್ಯಾಯಪೀಠ ವಿಷಾಧ ವ್ಯಕ್ತಪಡಿಸಿದೆ.

ತಾಜ್‌ಮಹಲ್‌ ಅನ್ನು ಉಳಿಸುವುದು ಭರವಸೆ ರಹಿತವಾಗಿದೆ, ಹೀಗಾಗಿ ಜು.31ರಿಂದ, ಮಾಲಿನ್ಯದಿಂದ ಜಗತ್ಪ್ರಸಿದ್ಧ ಸ್ಮಾರಕವನ್ನು ಹೇಗೆ ಉಳಿಸಬಹುದು ಎಂಬುದರ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ. ತಾಜ್‌ಮಹಲ್‌ ಇರುವ ಆಗ್ರಾ ಕೈಗಾರಿಕಾ ವಲಯಕ್ಕೆ ಸಮೀಪವಾಗಿದೆ, ಇಲ್ಲಿ ಕಳೆದ 30 ವರ್ಷಗಳಲ್ಲಿ ಮಾಲಿನ್ಯಮಟ್ಟತೀವ್ರವಾಗಿ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಆಗ್ರಾ ವಿಶ್ವದ ಅತ್ಯಂತ ಕಳಪೆ ವಾಯು ಹೊಂದಿರುವ ನಗರಗಳಲ್ಲಿ ಎಂಟನೇ ಸ್ಥಾನದಲ್ಲಿದೆ.