Asianet Suvarna News Asianet Suvarna News

ಕನ್ನಡಿಗರಿಗೆ ಶೇ.100 ಖಾಸಗಿ ಮೀಸಲು: ಎಜಿಗೆ ಕಡತ

ಕನ್ನಡ ಪ್ರೇಮ ಅಡ್ವೋಕೇಟ್ ಜನರಲ್ ಅಭಿಪ್ರಾಯದ ಬಳಿಕ ಸಚಿವ ಸಂಪುಟದಲ್ಲಿ ವಿಧೇಯಕ ಮಂಡನೆ

 

Reservation For Kannadigas in Private Sector  AG opinion Sought

ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ರಾಜ್ಯ ಕಾರ್ಮಿಕ ಇಲಾಖೆಯು ತೀವ್ರ ಕಸರತ್ತು ಮುಂದುವರೆಸಿದ್ದು, ಈ ಬಗ್ಗೆ ಅಡ್ವೊಕೇಟ್ ಜನರಲ್ ಅಭಿಪ್ರಾಯದ ಆಧಾರದ ಮೇಲೆ ಸೂಕ್ತ ಬದಲಾವಣೆಗಳೊಂದಿಗೆ ವಿಧೇಯಕವನ್ನು ಸಚಿವ ಸಂಪುಟದಲ್ಲಿ ಮಂಡನೆ ಮಾಡಲು ಕಾರ್ಮಿಕ ಇಲಾಖೆ ಸಜ್ಜಾಗಿದೆ.

ರಾಜ್ಯದ ಉದ್ಯೋಗಾಕಾಂಕ್ಷಿಗಳ ಹಿತ ಕಾಪಾಡಲು ಕನ್ನಡಿಗರಿಗೆ ಮೀಸಲಾತಿ ಕೊಡಿಸಲು ಕಾರ್ಮಿಕ ಇಲಾಖೆ ಪ್ರಯತ್ನ ನಡೆಸಿದ್ದು ಕನ್ನಡಿಗರಿಗೆ ಶೇ.70 ರಷ್ಟು ಮೀಸಲಾತಿ ಹಾಗೂ ಸಿ ಹಾಗೂ ‘ಡಿ’ ವೃಂದದ ಹುದ್ದೆಗಳಲ್ಲಿ ಶೇ.100 ರಷ್ಟು ಮೀಸಲಾತಿ ಕಲ್ಪಿಸಲು ಪ್ರಸ್ತಾವನೆ ಸಿದ್ಧಪಡಿಸಿದೆ. ಇದಕ್ಕೆ ಕಾನೂನು ಮಾನ್ಯತೆ ದೊರೆಯುವುದಿಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲಿ ಜಾರಿಗೆ ತರಬಹುದು ಎಂಬುದರ ಬಗ್ಗೆ ಪರಿಶೀಲನೆಗೆ ಅಡ್ವೊಕೇಟ್ ಜನರಲ್ ಬಳಿಗೆ ಮತ್ತೊಮ್ಮೆ ಕಡತ ಕಳುಹಿಸಲಾಗಿದೆ.

ಕನ್ನಡಿಗರಿಗೆ ಶೇ.70ರಷ್ಟು ಮೀಸಲಾತಿ ಹಾಗೂ ಸಿ-ಡಿ ವೃಂದದವರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕು ಎಂಬುದು ನಮ್ಮ ಚಿಂತನೆ. ಇದಕ್ಕಾಗಿ ಕನ್ನಡಿಗ ಎಂದರೆ ಯಾರು ಎಂಬ ವ್ಯಾಖ್ಯಾನವನ್ನೂ ನೀಡಿದ್ದೇವೆ. ಆದರೆ ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ಎಜಿ ಅಭಿಪ್ರಾಯಕ್ಕಾಗಿ ಮಂಡಿಸಿದ್ದೇವೆ. 2-3 ವಾರದಲ್ಲಿ ಅವರಿಂದ ಅಭಿಪ್ರಾಯ ಬರಲಿದೆ. ಅವರ ಒಪ್ಪಿಗೆ ದೊರೆತ ಬಳಿಕ ಅಗತ್ಯ ರೀತಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು.

ಸಂತೋಷ್ ಲಾಡ್ ಕಾರ್ಮಿಕ ಸಚಿವ

ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಸಚಿವ ಸಂಪುಟದಲ್ಲಿ ಮೀಸಲಾತಿ ಪ್ರಸ್ತಾವನೆ ಮಂಡಿಸುವುದಾಗಿ ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. 2013ರ ಕೈಗಾರಿಕಾ ನೀತಿಯಲ್ಲೇ ಇದರ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡಿತ್ತು. 2017ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಮಂಡಿಸಿದ ಬಜೆಟ್‌ನಲ್ಲಿ ಖಾಸಗಿ ವಲಯದ ಉದ್ಯಮಗಳ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇ.100 ರಷ್ಟು ಕನ್ನಡಿಗರಿಗೆ ಹಾಗೂ ಅದರಲ್ಲಿ ಶೇ.5ರಷ್ಟು ಅಂಗವಿಕಲರಿಗೆ ಮೀಸಲಿಡುವುದಾಗಿ ಘೋಷಿಸಿದ್ದರು.

ಇದರಂತೆ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಪಡೆದ ಉದ್ಯಮದಲ್ಲಿ ಮೀಸಲಾತಿ ನೀಡಲು ಕಾರ್ಮಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕಾನೂನು ಮಾನ್ಯತೆ ದೊರೆಯುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಯಾವ ರೀತಿ ಮಂಡಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಲು ಅಡ್ವೊಕೇಟ್ ಜನರಲ್’ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಮೀಸಲಾತಿಗೆ ಸಮಸ್ಯೆ ಏನು?: ಖಾಸಗಿ ಉದ್ಯಮಗಳ ನೇಮಕಾತಿಯಲ್ಲಿ ಶೇ 100ರಷ್ಟು ಮೀಸಲಾತಿ ಒದಗಿಸುವುದು ಅಸಾಂವಿಧಾನಿಕ ನಡೆ. ಇದು 14 ಹಾಗೂ 16ನೇ ವಿಧಿಯ ಉಲ್ಲಂಘನೆ. ದೇಶದ ಜನರನ್ನು ಪ್ರದೇಶ, ಧರ್ಮ ಮತ್ತು ಜಾತಿ ಆಧಾರದಲ್ಲಿ ಪಕ್ಷಪಾತ ಮಾಡುವುದಕ್ಕೆ 14 ಹಾಗೂ 16ನೇ ವಿಧಿ ಅವಕಾಶ ಕೊಡುವುದಿಲ್ಲ. ಹೀಗಾಗಿ ಕಾನೂನು ದೃಷ್ಟಿಯಲ್ಲಿ ಕಾರ್ಯಸಾಧುವಲ್ಲ. ಯಾರಾದರೂ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರೆ ಬಿದ್ದು ಹೋಗುತ್ತದೆ ಎಂದು ಕಾನೂನು ಇಲಾಖೆ ಸ್ಪಷ್ಟಪಡಿಸಿದೆ.

ಈ ಕಾನೂನು ಸಚಿವಾಲಯದ ಅಭಿಪ್ರಾಯವನ್ನು ಅಡ್ವೊಕೇಟ್ ಜನರಲ್‌ಗೆ ಕಳುಹಿಸಿ ಅವರ ಸಲಹೆ ಮೇರೆಗೆ ಸೂಕ್ತ ತಿದ್ದುಪಡಿಗಳೊಂದಿಗೆ ಮೀಸಲಾತಿ ವಿಧೇಯಕ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

 

 

 

Follow Us:
Download App:
  • android
  • ios