ಧಾರಾಕಾರ ಮಳೆ ಪರಿಣಾಮ ಥಾಯ್ಲೆಂಡ್‌ ಗುಹೆಯೊಳಗೆ ಸಿಲುಕಿರುವ ಫುಟ್ಬಾಲ್‌ ಕೋಚರ್‌ ಮತ್ತು 12 ಬಾಲಕರ ರಕ್ಷಣೆಗಾಗಿ ಇಲ್ಲಿನ ನೌಕಾಪಡೆ ಕಾರ್ಯತಂತ್ರ ರೂಪಿಸುತ್ತಿದೆ. 

ಮಾ ಸೈ(ಥಾಯ್ಲೆಂಡ್‌): ಧಾರಾಕಾರ ಮಳೆ ಪರಿಣಾಮ ಥಾಯ್ಲೆಂಡ್‌ ಗುಹೆಯೊಳಗೆ ಸಿಲುಕಿರುವ ಫುಟ್ಬಾಲ್‌ ಕೋಚರ್‌ ಮತ್ತು 12 ಬಾಲಕರ ರಕ್ಷಣೆಗಾಗಿ ಇಲ್ಲಿನ ನೌಕಾಪಡೆ ಕಾರ್ಯತಂತ್ರ ರೂಪಿಸುತ್ತಿದೆ. ಸದ್ಯ ಗುಹೆಯೊಳಗೆ ಸಿಲುಕಿದ ಮಕ್ಕಳ ಜತೆ ಪೋಷಕರ ಸಂವಹನ ಸಾಧ್ಯವಾಗುವಂತೆ ಮಾಡಲು ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ಫೇಬರ್‌ ಕೇಬಲ್‌ ಅನ್ನು ಅಳವಡಿಸಲಾಗುತ್ತಿದೆ.

ಇದು ಪೂರ್ಣಗೊಂಡ ಬಳಿಕ ಗುಹೆಯೊಳಗೆ ಸಿಲುಕಿದ ಬಾಲಕರ ಜತೆ ಅವರ ಕುಟುಂಬಸ್ಥರು ಕರೆ ಮಾಡಿ ಮಾತನಾಡಲು ಸಾಧ್ಯವಾಗುತ್ತದೆ ಎಂದು ಸಮೂಹ ಸಂಪರ್ಕದ ತಂತ್ರಜ್ಞರೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಗುಹೆಯೊಳಗೆ ಸಿಲುಕಿದ ಮಕ್ಕಳಿಗೆ ಈಜು ಬಾರದಿರುವುದು ಮತ್ತು ಕೆಸರು ನೀರು ಇರುವುದರಿಂದ ಮಕ್ಕಳನ್ನು ಗುಹೆಯೊಳಗಿಂದ ಹೊರ ತರುವುದು ಕಷ್ಟಸಾಧ್ಯ ಎನ್ನಲಾಗಿದೆ. 

ಹಾಗಾಗಿ, ಈ ಕೆಸರು ನೀರಿನಲ್ಲಿ ಧುಮುಕಿ ಈಜುವುದರಿಂದ ಮಾತ್ರ 12 ಬಾಲಕರು ಮತ್ತು ಕೋಚರ್‌ ಗುಹೆಯೊಳಗಿನಿಂದ ಹೊರಬರಲು ಇರಬಹುದಾದ ಏಕಮಾತ್ರ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಈಜು ಕಲಿಸಿಕೊಡಲಾಗುತ್ತದೆ. 

ಈ ವೇಳೆ ಮಾಸ್ಕ್‌ ಸೇರಿದಂತೆ ಇತರೆ ರಕ್ಷಾ ಕವಚಗಳನ್ನು ನೀಡಲಾಗುತ್ತದೆ. ಬಳಿಕ ಹೆಚ್ಚು ಸಾಮರ್ಥ್ಯವಿರುವವರನ್ನು ಮೊದಲಿಗೆ ಗುಹೆಯೊಳಗಿಂದ ಹೊರ ತರಲಾಗುತ್ತದೆ. ಈ ಸಂದರ್ಭದಲ್ಲಿ ಅವರ ಆರೋಗ್ಯ ಸ್ಥಿತಿ ಸೇರಿದಂತೆ ಇತರ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ಥಾಯ್‌ ನೌಕಾ ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.