ಸುಮಾರು 3 ವರ್ಷಗಳ ಹಿಂದಿನ ಮಾತು. ಚೆನ್ನೈಯಲ್ಲಿ ಐಐಟಿ ಓದಿದ್ದ ಗೀತಾಂಶು ಬಮಾನಿಯಾ ಎಂಬ ಯುವಕ ಪೆಪ್ಪರ್‌ಫ್ರೈ ಎಂಬ ರಾಷ್ಟ್ರದ ಬಹುದೊಡ್ಡ ಆನ್‌ಲೈನ್ ಫರ್ನಿಚರ್ ಸಪ್ಲೈ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ಇದೇ ಹೊತ್ತಿಗೆ ಈತ ಸ್ಥಳೀಯ ಮಳಿಗೆಯಿಂದ ಫರ್ನಿಚರ್ ಒಂದನ್ನು ಬಾಡಿಗೆಗೆ ಪಡೆದ.
ಬೆಂಗಳೂರು (ಫೆ.03): ಸುಮಾರು 3 ವರ್ಷಗಳ ಹಿಂದಿನ ಮಾತು. ಚೆನ್ನೈಯಲ್ಲಿ ಐಐಟಿ ಓದಿದ್ದ ಗೀತಾಂಶು ಬಮಾನಿಯಾ ಎಂಬ ಯುವಕ ಪೆಪ್ಪರ್ಫ್ರೈ ಎಂಬ ರಾಷ್ಟ್ರದ ಬಹುದೊಡ್ಡ ಆನ್ಲೈನ್ ಫರ್ನಿಚರ್ ಸಪ್ಲೈ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ಇದೇ ಹೊತ್ತಿಗೆ ಈತ ಸ್ಥಳೀಯ ಮಳಿಗೆಯಿಂದ ಫರ್ನಿಚರ್ ಒಂದನ್ನು ಬಾಡಿಗೆಗೆ ಪಡೆದ.
ಪ್ರತೀ ತಿಂಗಳು 400 ರೂ. ಪಾವತಿಸಿದರೆ ಸಾಕಿತ್ತು. ಅದನ್ನೇ ಶಾಪ್ನಲ್ಲಿ ವಿಚಾರಿಸಿದಾಗ ಅದರ ಬೆಲೆ ರೂ 10,000 ಎಂದು ಗೊತ್ತಾಯಿತು. ಆದರೆ ಅಂಗಡಿಯಾತನಿಗೆ ಅದು ಹೋಲ್'ಸೇಲ್'ನಲ್ಲಿ ರೂ.5000 ಕ್ಕೆಲ್ಲ ಸಿಗುತ್ತಿತ್ತು. ಆ ಹೊತ್ತಿಗೆ ಬಮಾನಿಯಾಗೆ ಅನಿಸಿದ್ದು, ಫರ್ನಿಚರ್ ಉದ್ಯಮದಲ್ಲಿ ಹೆಚ್ಚು ಆದಾಯ ಗಳಿಸಬಹುದು ಅಂತ. ಬಮಾನಿಯಾಗೆ ತನ್ನ ವಯಸ್ಸಿನ ಹುಡುಗರ ನಾಡಿಮಿಡಿತ ತಿಳಿದಿತ್ತು. ಈ ಕಾಲದ ಉದ್ಯೋಗಸ್ಥ ಹುಡುಗ ಹುಡುಗಿಯರಿಗೆ ಅತ್ಯಾಧುನಿಕ ಸೌಲಭ್ಯಗಳು ಬೇಕು. ಆದರೆ ಇವು ಕಡಿಮೆ ಬೆಲೆಯಲ್ಲಿ ಸಿಗಬೇಕು. ಆದರೆ ಕ್ವಾಲಿಟಿ ಚೆನ್ನಾಗಿರಬೇಕು. ಇಂಥವರಿಗೆ ಮನೆಗೆ ಬೇಕಾದ ಸಾಮಗ್ರಿಗಳೆಲ್ಲವನ್ನೂ ಖರೀದಿಸುವುದು ದುಬಾರಿಯಾಗುತ್ತೆ. ಅಲ್ಲದೇ ‘ಇಂದಿಲ್ಲಿ ನಾಳೆ ಇನ್ನೆಲ್ಲೋ’ ಅನ್ನುವ ಜೀವನಶೈಲಿಯಲ್ಲಿ ಮನೆ ಬದಲಾಯಿಸಿದಾಗ ಸಾಮಗ್ರಿಗಳನ್ನೂ ಸಾಗಿಸಬೇಕು. ‘ಈಸಿ ಗೋಯಿಂಗ್’ ಲೈಫ್ಸ್ಟೈಲ್ ಅನ್ನು ಇಷ್ಟಪಡುವ ಇಂದಿನವರಿಗೆ ಇದೆಲ್ಲ ಕಿರಿಕಿರಿ. ಈ ದಿಕ್ಕಿನಲ್ಲೇ ಯೋಚನೆ ಹರಿಯಬಿಟ್ಟಾಗ ಬಮಾನಿಯಾಗೆ ಹೊಳೆದದ್ದು ಬಾಡಿಗೆಗೆ ಮನೆ ಸಾಮಗ್ರಿ ಪೂರೈಸುವ ಐಡಿಯಾ!
ಶುರುವಾಯ್ತು ರೆಂಟೋಮೋಜೋ
ಈ ಕಂಪನಿ ಸೋಫಾ, ಟೇಬಲ್, ವಾಶಿಂಗ್ ಮೆಶಿನ್, ಟಿವಿ, ಬೈಕು ಹೀಗೆ ಮನೆ ಬಳಕೆಗೆ ಬೇಕಾಗುವ ಎಲ್ಲಾ ವಸ್ತುಗಳನ್ನೂ ಬಾಡಿಗೆಗೆ ನೀಡುವ ಕಂಪನಿ ತೆರೆಯಬೇಕು ಅನ್ನುವ ಪ್ಲಾನ್. ಇಂಥದ್ದೊಂದು ಯೋಚನೆ ಹುಟ್ಟಿಕೊಂಡಿದ್ದೇ ಗೀತಾಂಶು ಖುಷಿಯಾಗಿಬಿಟ್ಟರು. ತಕ್ಷಣ ತನ್ನ ಯೋಚನೆಯನ್ನು ಗೆಳೆಯರಿಗೆ ತಿಳಿಸಿದರು. ಗೆಳೆಯರಿಗೂ ಖುಷಿಯಾಯಿತು. ಉತ್ಸಾಹದ ಪ್ರತಿಕ್ರಿಯೆಯ ಜೊತೆಗೆ, ತಾವೂ ಇದರಲ್ಲಿ ಪಾಲುದಾರರಾಗುವ ಸೂಚನೆ ಕೊಟ್ಟರು. ಅದರಂತೆ ಅಜಯ್ ನೈನ್, ಅಚಲ್ ಮಿತ್ತಲ್, ಗೌತಮ್ ಅಡುಕಿಯಾ ಗೀತಾಂಶು ಜೊತೆಗೆ ಕೈ ಜೋಡಿಸಿದರು. ಹಾಗೆ ಅವರು ಶುರು ಮಾಡಿದ ಕಂಪನಿಯ ಹೆಸರೇ ರೆಂಟೋಮೋಜೋ.
ನೂತನ ಟ್ಯಾಗ್'ಲೈನ್
‘ಹೊಸ ಜನರೇಶನ್ನ ಜೀವನಶೈಲಿ ಗಮನಿಸಿ, ಅವರ ತುರ್ತು ಅಗತ್ಯಗಳೇನೆಂದು ಅರಿಯಿರಿ, ಅದರ ಆಧಾರದಲ್ಲಿ ನಿಮ್ಮ ಬ್ಯುಸಿನೆಸ್ ಆರಂಭಿಸಿ’ ಎಂಬುದು ನ್ಯೂಏಜ್ ವ್ಯಾಪಾರದ ತಂತ್ರ. ಈ ಐಡಿಯಾ ಬಳಸಿ ಗೆದ್ದಿತು ರೆಂಟೋಮೋಜೋ ಕಂಪನಿ. ಈ ಕಂಪನಿಗೆ ನೀವು ಪ್ರತೀ ತಿಂಗಳು ಒಂದಿಷ್ಟು ಬಾಡಿಗೆ ಪಾವತಿಸಿದರಾಯ್ತು. ಮನೆಗೆ ಬೇಕಾದ ಫರ್ನಿಚರ್ಗಳು, ಟಿ.ವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಮೊದಲಾದ ಅಪ್ಲಯನ್ಸ್ಗಳು, ಬೈಕ್'ಗಳನ್ನೂ ರೆಂಟೋಮೋಜೋ ಬಾಡಿಗೆಗೆ ನೀಡುತ್ತದೆ. ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿ ಇದೆ. ಬೆಂಗಳೂರಲ್ಲದೇ 8 ನಗರಗಳಲ್ಲಿ ಮೋಜೋ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಜೊತೆಗಿನ ವ್ಯವಹಾರಗಳು ಆನ್'ಲೈನ್ ಮೂಲಕವೇ ನಡೆಯುತ್ತದೆ. ಈ ಪುಟ್ಟ ಕಂಪನಿಯ ಕ್ಷಿಪ್ರ ಬೆಳವಣಿಗೆಯನ್ನು ದೈತ್ಯಕಂಪನಿಗಳೇ ಅಚ್ಚರಿಯಿಂದ ನೋಡುತ್ತಿವೆ. ರೆಂಟೋಮೋಜೋದ ಸೂತ್ರಧಾರ ಗೀತಾಂಶು ಬಮಾನಿಯಾ ಫೋರ್ಬ್ಸ್ ಪ್ರಕಟಿಸಿರುವ ಏಷ್ಯಾದ 30 ರೊಳಗಿನ ಉದ್ಯಮಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಈ ವರ್ಷ 17 ದಶಲಕ್ಷ ಡಾಲರ್ ಬಂಡವಾಳ ಸಂಗ್ರಹಿಸಿದೆ ರೆಂಟೋಮೋಜೋ.
-ಪ್ರಿಯಾ ಕೇರ್ವಾಶೆ
