ಕೆಪಿಟಿಸಿಎಲ್ ನೌಕರರಿಗೆ ಗುಡ್ ನ್ಯೂಸ್..!
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಗುಡ್ ನ್ಯೂಸ್..!
ಬೆಂಗಳೂರು, [ಅ.11]: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಕಳೆದ ಹತ್ತು ವರ್ಷಗಳಿಂದ ರೆವಿನ್ಯೂ ಅಸಿಸ್ಟೆಂಟ್ಸ್ ಆಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸುಮಾರು 400 ಅಂಗವಿಕಲರ ಸೇವೆಯನ್ನು ಕಾಯಂ ಮಾಡುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ.
ತಮ್ಮನ್ನು ಸೇವೆಗೆ ಕಾಯಂಗೊಳಿಸಲು ಕೆಪಿಟಿಸಿಎಲ್‌ಗೆ ಆದೇಶಿಸುವಂತೆ ಕೋರಿ ಟಿ.ಸಿ.ಶಶಿಕಲಾ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಕೆಪಿಟಿಸಿಎಲ್ ಆಡಳಿತ ಮಂಡಳಿಯು ಇದೇ ಬಗೆಯ ವಿಕಲಚೇತನರಾಗಿದ್ದ ಜ್ಯೂನಿಯರ್ ಎಂಜಿನಿಯರ್‌ಗಳ ಸೇವೆ ಕಾಯಂಗೊಳಿಸಲು ನಿರ್ಧರಿಸಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ತಮ್ಮ ಸೇವೆ ಕಾಯಂಗೊಳಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ತಮ್ಮ ಸೇವೆಯನ್ನು ಕಾಯಂಗೊಳಿಸುತ್ತಿಲ್ಲ ಎಂದು ತಿಳಿಸಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ 2010ರಿಂದ ಪೂರ್ವಾನ್ವಯವಾಗುವಂತೆ ಕೆಪಿಟಿಸಿಎಲ್‌ನಲ್ಲಿ 2007ರಿಂದ ರೆವಿನ್ಯೂ ಅಸಿಸ್ಟೆಂಟ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲರ ಸೇವೆ ಕಾಯಂಗೊಳಿಸುವಂತೆ ಆದೇಶಿಸಿತು.