ಒಂದೂವರೆ ತಾಸಲ್ಲಿ ಬೆಂಗ್ಳೂರಿಂದ ಮೈಸೂರಿಗೆ!

First Published 25, Mar 2018, 8:45 AM IST
Reduce Travel time between Bengaluru Mysuru
Highlights

ಬೆಂಗಳೂರಿನಿಂದ ಮೈಸೂರಿಗೆ ಕೇವಲ ಒಂದೂವರೆ ತಾಸಿನಲ್ಲಿ ಪ್ರಯಾಣ ಮಾಡಬಹುದಾದ ಷಟ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಬೆಂಗಳೂರು : ಬೆಂಗಳೂರಿನಿಂದ ಮೈಸೂರಿಗೆ ಕೇವಲ ಒಂದೂವರೆ ತಾಸಿನಲ್ಲಿ ಪ್ರಯಾಣ ಮಾಡಬಹುದಾದ ಷಟ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗಡ್ಕರಿ ಅವರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಅಷ್ಟೇ ಅಲ್ಲದೇ, ರಾಜ್ಯದ ವಿವಿಧ ಹೆದ್ದಾರಿ ಕಾಮಗಾರಿಗಳ ಶಂಕುಸ್ಥಾಪನೆಗಳನ್ನೂ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ವಿವಿಧ ನದಿ ಜೋಡಣೆಗೆ ಕೇಂದ್ರ ಸರ್ಕಾರವು ಸಹಕಾರ ನೀಡಲಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ದೇಶದಲ್ಲಿಯೇ ನಂ.1 ರಸ್ತೆಯಾಗಲಿದೆ ಎಂದರು.

4 ತಾಸಿನ ಬದಲು 1.30 ಗಂಟೆ!:  ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಈಗ 3ರಿಂದ 4 ತಾಸು ಹಿಡಿಯುತ್ತದೆ. ಆದರೆ ಇನ್ನು ಕೇವಲ 1.30 ಗಂಟೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುವಂತೆ ಮಾಡಲು ಬೆಂಗಳೂರು- ಮೈಸೂರು ಹೆದ್ದಾರಿಯನ್ನು 6 ಪಥ ಮಾಡಲಾಗುತ್ತದೆ ಎಂದು ಗಡ್ಕರಿ ಹೇಳಿದರು.

ಬೆಂಗಳೂರು-ಮೈಸೂರು ಷಟ್ಪಥ ಕಾಮಗಾರಿ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣಗಳಲ್ಲಿ ಬೈಪಾಸ್‌ ನಿರ್ಮಾಣವಾಗಲಿವೆ. ಎರಡು ಹಂತದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಮೊದಲ ಹಂತದಲ್ಲಿ ಬೆಂಗಳೂರು- ನಿಡಘಟ್ಟ(18.ಕಿ.ಮೀ- 74.20 ಕಿ.ಮೀ), ಎರಡನೇ ಹಂತದಲ್ಲಿ ನಿಡಫಟ್ಟ- ಮೈಸೂರು (74.20 ಕಿ.ಮೀ- 135.ಕಿ.ಮೀ) ಮಾರ್ಗ ನಿರ್ಮಾಣವಾಗಲಿದೆ. ಇದರಲ್ಲಿ ಆರು ಲೈನ್‌ ಮುಖ್ಯ ರಸ್ತೆ ಹಾಗೂ ಎರಡು ಸವೀರ್‍ಸ್‌ ರಸ್ತೆ ನಿರ್ಮಾಣವಾಗಲಿವೆ ಎಂದು ಗಡ್ಕರಿ ವಿವರಿಸಿದರು.

ಸ್ಕೈ ಬಸ್‌ ಯೋಜನೆ: ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 250 ಜನ ಸಂಚರಿಸುವಂತಹ ಸ್ಕೈ ಬಸ್‌ ಯೋಜನೆ ಅನುಷ್ಠಾನ ಮಾಡುವ ಚಿಂತನೆ ಇದೆ. ಮೆಟ್ರೋ ರೈಲಿಗೆ ಪ್ರತಿ ಕಿ.ಮೀ.ಗೆ 350 ಕೋಟಿ ರು. ವೆಚ್ಚವಾಗಲಿದೆ. ಸ್ಕೈಬಸ್‌ಗೆ ಕೇವಲ 50 ಕೋಟಿ ರು. ವೆಚ್ಚವಾಗಲಿದೆ. ಸದ್ಯ ದಿಲ್ಲಿ ಸಮೀಪದ ಧೌಲಾಕುವಾದಿಂದ ಮಾನೇಸರ್‌ ವರೆಗೆ ಈ ಯೋಜನೆ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು-ಮೈಸೂರು ನಡುವೆ ಜಾರಿಗೊಳಿಸಬಹುದು ಎಂದರು.

loader