ಟೋಕಿಯೊ (ಸೆ.15): ‘‘ಅಯ್ಯೋ ಅವನು ಬರ್ತಾ ಇದಾನಪ್ಪ, ಹೇಗಪ್ಪಾ ಅವನ ಪಕ್ಕ ಕೂರೋದು,’’ ಈ ರೀತಿಯ ಕೊಂಕು ಮಾತುಗಳು ದೇಹ ದುರ್ಗಂಧವಿರುವವರ ಬಗ್ಗೆ ಕೇಳಿಬರುತ್ತಲೇ ಇರುತ್ತದೆ. ವಿಚಾರವೇನೆಂದ್ರೆ ಜಪಾನ್‌ನ ಉದ್ಯೋಗ ಸ್ಥಳಗಳಲ್ಲಿ ಈ ಸಮಸ್ಯೆ ವಿಪರೀತಕ್ಕೆ ಹೋಗಿದೆ. ಇದನ್ನು ತಡೆಯಲು ಅಲ್ಲಿನ ಕಂಪನಿಗಳು ಏನು ಮಾಡಿವೆ ಗೊತ್ತೇ? ಡ್ರೆಸ್‌ ಕೋಡ್‌ ಜತೆಗೆ, ಬಾಯಿ, ಮೈ ಶುದ್ಧವಾಗಿಟ್ಟುಕೊಳ್ಳುವಂತೆ ಫರ್ಮಾನನ್ನೇ ಹೊರಡಿಸಿವೆ. ಅಷ್ಟೇ ಅಲ್ಲ, ಕಚೇರಿಯ ದ್ವಾರದ ಬಳಿ ಸ್ವಾಗತಕಾರಣಿಯರನ್ನು ನಿಲ್ಲಿಸಿದ್ದಾರೆ. ಅವರ ಕೆಲಸ ದೇಹವನ್ನು ಮೂಸಿ ನೋಡಿಯೇ ಉದ್ಯೋಗಿಗಳನ್ನು ಒಳಗೆ ಬಿಡುತ್ತಿದ್ದಾರೆ.

ಈ ಕುರಿತು ‘ಡೈಲಿ ಮೈಲ್‌’ ವರದಿ ಮಾಡಿದೆ. ಕೆಲಸದ ಆರಂಭಕ್ಕೆ ಮೊದಲು ಅಥವಾ ನಂತರ ಬಾಯಿ ವಾಸನೆ ಬರುವಂಥ ಆಹಾರ ಸೇವಿಸದಂತೆ ಅಲ್ಲಿನ ಸಿಬ್ಬಂದಿಗೆ ಸೂಚಿಸಲಾಗಿದೆ. ಇದರೊಂದಿಗೆ ಟೀ ಬ್ರೇಕ್‌ ಅಥವಾ ಊಟದ ವಿರಾಮದ ಅವಧಿಯಲ್ಲಿ ಕಡ್ಡಾಯವಾಗಿ ಹಲ್ಲುಜ್ಜಬೇಕು. ಕೆಲವೊಂದು ಕಂಪನಿಗಳಲ್ಲಿ ಕೆಲಸಗಾರರ ದೇಹ ದುರ್ಗಂಧ ಬೀರುತ್ತದೆಯೋ ಇಲ್ಲವೋ ಎನ್ನುವುದನ್ನು ಮೂಸಿ ನೋಡಲು ಮಹಿಳೆಯರನ್ನು ನೇಮಿಸಲಾಗಿದೆ. ಸಿಗರೇಟ್‌ ಸೇವನೆಯಿಂದ ಬರುವ ದುರ್ವಾಸನೆ ಮತ್ತು ವಿಪರೀತ ಸುಗಂಧ ದ್ರವ್ಯ ಉಪಯೋಗಿಸುವವರನ್ನು ಕಂಪನಿಗಳ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ.

ಜಪಾನ್‌ನ ಗಾಜುಗಳ ತಯಾರಿಕಾ ಕಂಪನಿ ‘ಒನ್‌ಡೇಸ್‌’ ಮಳಿಗೆಗಳಲ್ಲಿ ನೌಕರರ ಬಾಯಿಯಿಂದ ಸಿಗರೇಟ್‌ ಮತ್ತು ಇತರ ವಾಸನೆ ಬರುತ್ತಿತ್ತು ಎಂದು ಗ್ರಾಹಕರು ದೂರಿದ್ದರು. ಹೀಗಾಗಿ ಕಂಪನಿ ಸಿಬ್ಬಂದಿ ಕೆಲಸದ ವೇಳೆ ಹಲ್ಲುಜ್ಜುವಂತೆ ಮತ್ತು ಸುಗಂಧ ದ್ರವ್ಯ ಬಳಸಲು ಕಂಪನಿ ಸೂಚಿಸಿತ್ತು. ಈ ಬೆಳವಣಿಗೆಯಾದ ಬಳಿಕ ಹಲವು ಕಂಪನಿಗಳಲ್ಲಿ ದೇಹ ದುರ್ಗಂಧ ಪರಿಶೀಲನೆಗಾಗಿಯೇ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ದೇಹದ ವಾಸನೆಯನ್ನು ಕಡಿಮೆಗೊಳಿಸುವ ಸೆಮಿನಾರ್‌ಗಳಿಗೆ ನೌಕರರನ್ನು ಕಳುಹಿಸಲಾಗುತ್ತಿದೆ. ಅಲ್ಲಿ ಅದನ್ನು ತಡೆಯಲುಬೇಕಾದ ಕ್ರಮಗಳನ್ನು ಹೇಳಿಕೊಡಲಾಗುತ್ತಿದೆಯಂತೆ.

- ಸಿಬ್ಬಂದಿಯ ದೇಹದ ದುರ್ಗಂಧ ತಡೆಗೆ ಹಲವು ಕ್ರಮ ಕೈಗೊಂಡ ಜಪಾನ್‌ ಕಂಪನಿಗಳು

- ಪರಿಶೀಲನೆಗಾಗಿಯೇ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಂಡಿವೆ ಹಲವು ಸಂಸ್ಥೆಗಳು

- ಬ್ರೇಕ್‌ಫೆಸ್ಟ್‌ನಂತರ ಹಲ್ಲುಜ್ಜುವುದು, ದುರ್ಗಂಧ ತಡೆ ಕ್ರಮ ಕೈಗೊಳ್ಳುವುದು ಸಿಬ್ಬಂದಿಗೆ ಅನಿವಾರ್ಯ