ಇತ್ತ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಅತ್ತ ಅತೃಪ್ತರು ಶಾಸಕರು ದೇಗುಲ ದರ್ಶನ ಪಡೆದಿದ್ದಾರೆ.
ಬೆಂಗಳೂರು [ಜು.27]: ಆಷಾಢ ಮಾಸದ ಕೊನೆಯ ಶುಕ್ರವಾರ ಇತ್ತ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಅತ್ತ ಮುಂಬೈನಲ್ಲಿರುವ ಕೆಲ ಅತೃಪ್ತರು ಅಲ್ಲಿನ ಲೋನಾವಾಲದಲ್ಲಿರುವ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳಿ ಲಕ್ಷ್ಮಿದೇವಿ ದರ್ಶನ ಪಡೆದಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ ಸೇರಿದಂತೆ ಕೆಲ ಅತೃಪ್ತರು ಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು. ನಂತರ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಉಳಿದಂತೆ ರಾಜೀನಾಮೆ ಸಲ್ಲಿಸಿರುವ ಮುನಿರತ್ನ, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್, ಎಚ್.ವಿಶ್ವನಾಥ್, ಕೆ.ಗೋಪಾಲಯ್ಯ, ನಾರಾಯಣಗೌಡ ಇತರೆ ಕೆಲವರು ದೇವಸ್ಥಾನಕ್ಕೆ ತೆರಳದೆ ಅಜ್ಞಾತ ಸ್ಥಳದಲ್ಲೇ ಉಳಿದಿದ್ದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಿ ಪೂರ್ಣ ಸರ್ಕಾರ ರಚನೆಯಾಗುವರೆಗೂ ಬೆಂಗಳೂರಿಗೆ ವಾಪಸ್ಸಾಗದಿರಲು ತೀರ್ಮಾನಿಸಿರುವ ಅತೃಪ್ತರು, ಗೌಪ್ಯ ಸ್ಥಳದಲ್ಲಿ ಸಭೆ ಸೇರಿ ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮೂವರು ಅತೃಪ್ತರು ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಜೊತೆಗೆ ಇನ್ನು ಕೆಲ ದಿನಗಳಲ್ಲೇ ಇನ್ನಷ್ಟುಅತೃಪ್ತರ ಅನರ್ಹತೆ ಪ್ರಕರಣ ಸಂಬಂಧ ಸ್ಪೀಕರ್ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ಕಾದು ನೋಡೋಣ, ಇನ್ನೂ ಯಾರನ್ನಾದರೂ ಅನರ್ಹಗೊಳಿಸಿದರೆ ಎಲ್ಲರೂ ಒಟ್ಟಾಗಿ ನ್ಯಾಯಾಲಯದಲ್ಲಿ ಅನರ್ಹತೆ ಪ್ರಶ್ನಿಸಿ ಅರ್ಜಿ ಸಲ್ಲಿಸೋಣ ಎಂದು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
