ಸಮ್ಮಿಶ್ರ ಸರ್ಕಾರದ ದೋಸ್ತಿಗಳಾದ ಕಾಂಗ್ರೆಸ್-ಜೆಡಿಎಸ್ ನಡುವೆ ನಡೆದಿರುವ ತಿಕ್ಕಾಟದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಅತೃಪ್ತರು ಬಿಜೆಪಿಯತ್ತ ಧಾವಿಸುವ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು : ಒಂದು ಕಡೆ ಪಕ್ಷದ ನಿರ್ಲಕ್ಷ್ಯ ಹಾಗೂ ಮತ್ತೊಂದು ಕಡೆ ಸಮ್ಮಿಶ್ರ ಸರ್ಕಾರದ ದೋಸ್ತಿಗಳಾದ ಕಾಂಗ್ರೆಸ್-ಜೆಡಿಎಸ್ ನಡುವೆ ನಡೆದಿರುವ ತಿಕ್ಕಾಟದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಅತೃಪ್ತರು ಬಿಜೆಪಿಯತ್ತ ಧಾವಿಸುವ ಪ್ರಯತ್ನವನ್ನು ತೀವ್ರಗೊಳಿಸಿದ್ದು, ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದಿಂದ ಕೊಕ್ ಪಡೆದ ರಮೇಶ್ ಜಾರಕಿಹೊಳಿ, ಆರ್.ಶಂಕರ್ ಹಾಗೂ ಶಾಸಕ ವಿ.ನಾಗೇಂದ್ರ ಅವರು ದೆಹಲಿಯಲ್ಲಿ ಶನಿವಾರ ಬಿಜೆಪಿಯ ಹಿರಿಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು ಎಂದು ಹೇಳಲಾಗುತ್ತಿದೆ.
ಆದರೆ, ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಲೋಕಸಭೆ ತಯಾರಿಗಾಗಿ ನಾನು ಹಾಗೂ ಪಕ್ಷಾಧ್ಯಕ್ಷ ಯಡಿಯೂರಪ್ಪ ದೆಹಲಿಯಲ್ಲಿದ್ದೇವೆ. ನಾವು ಕಾಂಗ್ರೆಸ್ನ ಯಾವೊಬ್ಬ ಶಾಸಕರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ರಾಜ್ಯ ಬಿಜೆಪಿಯ ಈ ಪ್ರಮುಖ ನಾಯಕರು ದೆಹಲಿಯಲ್ಲಿ ಇರುವ ವೇಳೆಯೇ ಕಾಂಗ್ರೆಸ್ನ ಅತೃಪ್ತರು ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಕಾಕತಾಳೀಯವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ. ಕಾಂಗ್ರೆಸ್ನ ಅತೃಪ್ತರು ಬಿಜೆಪಿ ನಾಯಕರನ್ನು ಸಂಪರ್ಕಿಸುವ ಪ್ರಯತ್ನವನ್ನು ಕಳೆದು ಹಲವು ದಿನಗಳಿಂದ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಪ್ರಯತ್ನದಲ್ಲಿ ಅತೃಪ್ತರು ಶನಿವಾರ ಒಂದು ಹೆಜ್ಜೆ ಮುಂದೆ ಹೋಗಿದ್ದು ಬಿಜೆಪಿ ನಾಯಕರೊಂದಿಗೆ ಸಭೆಯನ್ನೂ ನಡೆಸಿದರು ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ದೆಹಲಿಯಲ್ಲಿರುವ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಇನ್ನಿಬ್ಬರು ಹಿರಿಯ ನಾಯಕಕರೊಂದಿಗೆ ಕಾಂಗ್ರೆಸ್ನ ಅತೃಪ್ತ ಶಾಸಕರು ಮಹತ್ವದ ಸಭೆಯನ್ನು ನಡೆಸಿದ್ದು, ತಮ್ಮೊಂದಿಗೆ ಕಾಂಗ್ರೆಸ್ನ ಸುಮಾರು 18ರಿಂದ 20 ಶಾಸಕರು ಇದ್ದಾರೆ ಎಂಬ ಮಾಹಿತಿಯನ್ನು ಬಿಜೆಪಿ ನಾಯಕತ್ವಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮುಂದಿನ ರೂಪರೇಷೆ ಬಗ್ಗೆ ದೆಹಲಿಯ ಪ್ರಮುಖ ಹೋಟೆಲ್ವೊಂದರಲ್ಲಿ ಸುಮಾರು ಮೂರು ತಾಸಿಗೂ ಹೆಚ್ಚು ಕಾಲ ವಿವರವಾಗಿ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯ ನಂತರ ಈ ತ್ರಿವಳಿ ಅತೃಪ್ತರು ಭಾನುವಾರ ಮತ್ತೊಂದು ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಇದಾದ ನಂತರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ.
ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದರಿಂದ ತೀವ್ರ ಕ್ರುದ್ಧರಾಗಿರುವ ರಮೇಶ್ ಜಾರಕಿಹೊಳಿ ಅವರು ಕಳೆದ ನಾಲ್ಕೈದು ದಿನಗಳಿಂದ ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಸೇರಿದಂತೆ ಯಾರ ಸಂಪರ್ಕಕ್ಕೂ ದೊರೆತಿರಲಿಲ್ಲ. ಆದರೆ, ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆಗಳನ್ನು ನಡೆಸುತ್ತಿದ್ದಾರೆ ಎಂಬ ಗುಲ್ಲು ಹಬ್ಬಿತ್ತು. ಇಂತಹ ವದಂತಿಗಳನ್ನು ಕಾಂಗ್ರೆಸ್ ನಾಯಕರು ತಳ್ಳಿ ಹಾಕಿದ್ದರು. ರಮೇಶ್ ಅವರು ಪಕ್ಷ ಬಿಡುವುದಿಲ್ಲ ಎಂದೇ ಹೇಳುತ್ತಿದ್ದರು.
ಆದರೆ, ಕನ್ನಡಪ್ರಭಕ್ಕೆ ದೊರಕಿರುವ ಮಾಹಿತಿ ಪ್ರಕಾರ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ನ ಅತೃಪ್ತರು ಬಿಜೆಪಿಯ ನಾಯಕರನ್ನು ಸಂಪರ್ಕಿಸುವ ಹಾಗೂ ಮುಂದಿನ ರೂಪರೇಷೆ ಸಿದ್ಧಪಡಿಸುವ ದಿಸೆಯಲ್ಲಿ ಸಾಕಷ್ಟುಮುಂದೆ ಸಾಗಿದ್ದು, ಅವರೊಂದಿಗೆ ಒಂದಷ್ಟುಕಾಂಗ್ರೆಸ್ನ ಅತೃಪ್ತ ಶಾಸಕರು ಇದ್ದಾರೆ ಎಂದು ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿ ಆಪ್ತರ ಪ್ರಕಾರ ಈ ಸಂಖ್ಯೆ 18ರಿಂದ 20 ಮುಟ್ಟಿದೆ. ಯಾವ ರೀತಿ ಮುಂದಿನ ಹೆಜ್ಜೆಯಿಡಬೇಕು? ಕಾಂಗ್ರೆಸ್ನಿಂದ ಹೊರ ಬಂದ ನಂತರ ಮುಂದೇನು ಮಾಡಬೇಕು ಎಂಬುದು ಸೇರಿದಂತೆ ಮುಂದಿನ ನಡೆಯ ಬಗ್ಗೆ ಸವಿವರವಾದ ಚರ್ಚೆಯು ಈಗಾಗಲೇ ಮುಗಿದಿದೆ. ಭಾನುವಾರ ನಡೆಯಲಿರುವ ಮಹತ್ವದ ಸಭೆಯ ನಂತರ ಈ ಬೆಳವಣಿಗೆಗಳು ಸ್ಪಷ್ಟವಾಗಿ ಬಹಿರಂಗಕ್ಕೆ ಬರಲಿವೆ ಎಂದು ಹೇಳಲಾಗುತ್ತಿದೆ.ಆದರೆ, ಬಿಜೆಪಿಯ ಉನ್ನತ ನಾಯಕರು ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದೇ ಹೇಳುತ್ತಾರೆ.
