Asianet Suvarna News Asianet Suvarna News

ಕೊಡಗಿನ ದುಸ್ಥಿತಿಗೆ ಏನು ಕಾರಣ?

ಕಳೆದ 10 ವರ್ಷದಲ್ಲಿ 2,800 ಎಕರೆ ಕೃಷಿ ಭೂಮಿ ಪರಿವರ್ತನೆ | ಹತ್ತು ವರ್ಷದಲ್ಲಿ ಸುಮಾರು 13 ಸಾವಿರ ಎಕರೆ ಅರಣ್ಯ ನಾಶ |  ಮಿತಿ ಮೀರಿದ ನಗರೀಕರಣ, ವಾಣಿಜ್ಯ ಚಟುವಟಿಕೆ | ವಾರ್ಷಿಕ ಸರಾಸರಿ 30 ಲಕ್ಷ ಪ್ರವಾಸಿಗರ ಆಗಮನ | 67 ಪ್ರಮುಖ ರೆಸಾರ್ಟ್, 477 ಅಧಿಕೃತ ಹೋಂ ಸ್ಟೇ 1900 ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ನಿರ್ಮಾಣ |   ಕೇರಳದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳ

Reason for Kodagu flood
Author
Bengaluru, First Published Aug 21, 2018, 10:24 AM IST

ಮಡಿಕೇರಿ (ಆ. 21): ಕೊಡಗಿಗೆ ಭಾರಿ ಮಳೆ ಹೊಸತಲ್ಲ. ಕರುನಾಡ ಕಾಶ್ಮೀರ ಎನಿಸಿದ ಈ ಸುಂದರ ಜಿಲ್ಲೆಯ ನಕ್ಷೆಯನ್ನೇ ಬದಲಿಸುವಂತೆ ಈ ಬಾರಿಯ ಮಳೆಗಿಂತ ಹಲವು ಪಟ್ಟು ಭಾರಿ ಮಳೆಗಳನ್ನು ಕೊಡಗು ಈ ಹಿಂದೆ ಸಾಕಷ್ಟು ಸಲ ಸಮರ್ಥವಾಗಿ ಎದುರಿಸಿದೆ. ಆದರೆ, ಈ ಬಾರಿ ಮಂಡಿಯೂರಿದ್ದೇಕೆ?

ಏಕೆಂದರೆ, ಹಿಂದೆಂದಿಗಿಂತಲೂ ಕಳೆದ ಒಂದು ದಶಕದಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಭೂ ಬಳಕೆ ಪರಿವರ್ತನೆಯಾಗಿದೆ. ಅರಣ್ಯ ನಾಶ ವಿಪರೀತವಾಗಿದೆ. ಮಿತಿ ಮೀರಿದ ವಾಣಿಜ್ಯ ಚಟುವಟಿಕೆ ಹಾಗೂ ನಗರೀಕರಣದಿಂದಾಗಿ
ಕೊಡಗು ಎಂಬ ವೀರ ನಾಡು ಭಾರಿ ಮಳೆಯನ್ನು ತಡೆದುಕೊಳ್ಳಬಲ್ಲ ತನ್ನ ಧಾರಣ ಶಕ್ತಿಯನ್ನು ಕಳೆದುಕೊಂಡಿದೆ ಎನ್ನುತ್ತಾರೆ ತಜ್ಞರು.

ಕೊಡಗಿಗೆ ಭಾರಿ ಮಳೆ ಎಂಬುದು ಹೊಸತೇನೂ ಅಲ್ಲ. ಈ ಬಾರಿ ಅಂದರೆ, ಪ್ರಸ್ತುತ ಮಾನ್ಸೂನ್‌ನಲ್ಲಿ ವಾಡಿಕೆ ಮಳೆಗಿಂತ ಶೇ.43 ರಷ್ಟು ಹೆಚ್ಚು ಮಳೆ ಸುರಿದಿದೆ. ಕೇವಲ ಒಂದು ದಶಕದ ಹಿಂದೆ ಅಂದರೆ, 2008- 09 ನೇ ಸಾಲಿನಲ್ಲಿ ವಾಡಿಕೆಗಿಂತ ಶೇ.64 ರಷ್ಟು (ಅರ್ಥಾತ್ ಈ ಬಾರಿಗಿಂತ ಶೇ.21 ರಷ್ಟು ಹೆಚ್ಚು) ಮಳೆ ಸುರಿದಿತ್ತು. ಆದರೆ, ಆಗ ಈ ಪ್ರಮಾಣದಲ್ಲಿ ನಷ್ಟ ಉಂಟಾಗಿ ರಲಿಲ್ಲ. ಹೀಗಾಗಿ ಒಂದು ವಾರದಿಂದ ಉಂಟಾಗುತ್ತಿರುವ ಪ್ರವಾಹದ ಭೀಕರತೆಗೆ ಮಳೆ ಮಾತ್ರ ಕಾರಣವಲ್ಲ ಎಂಬುದು ಸ್ಪಷ್ಟ.

ತಜ್ಞರ ಪ್ರಕಾರ ಇದು ‘ಮಾನವ ನಿರ್ಮಿತ ಪ್ರಮಾದ’ ಹಾಗೂ ಸರ್ಕಾರವೇ ಸೃಷ್ಟಿಸಿಕೊಡುತ್ತಿರುವ ‘ನೈಸರ್ಗಿಕ ಆತ್ಮಹತ್ಯೆ.’ ಪ್ರತಿ ವರ್ಷ ಕೊಡಗಿಗೆ ಆಗಮಿಸುವ ಸರಾಸರಿ 30 ಲಕ್ಷ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ, ವಾಸ್ತವ್ಯಕ್ಕೆ ಹೋಟೆಲ್, ರೆಸಾರ್ಟ್ ನಿರ್ಮಾಣ ಹೀಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪರಿಸರದ ಸೂಕ್ಷ್ಮತೆಯನ್ನು ನಾಶ ಮಾಡಲಾಗುತ್ತಿದೆ.

ಜತೆಗೆ ಇಲ್ಲಿನ ಪರಿಸರಕ್ಕೆ ಮನಸೋತ ಹಲವು ವಲಸಿಗರು ಕೊಡಗು ಭಾಗದಲ್ಲೊಂದು ಸ್ವಂತ ಮನೆ ಹೊಂದಲು ಮುಂದಾಗುತ್ತಿದ್ದಾರೆ.  ಹೀಗಾಗಿ ಪರಿಸರದಲ್ಲಿ ಉಂಟಾಗುತ್ತಿರುವ ವ್ಯಾಪಕ ಬದಲಾವಣೆಯಿಂದಾಗಿಯೇ ದಶಕದ ಹಿಂದೆ ಇದಕ್ಕಿಂತ ಹೆಚ್ಚು ಮಳೆಯಾದರೂ ಉಂಟಾಗದ ಪ್ರವಾಹ ಹಾಗೂ ಸಾವು-ನೋವನ್ನು ಈ ಬಾರಿ ಕೊಡಗು ಅನುಭವಿಸಿದೆ.

2800 ಎಕರೆ ಅಧಿಕೃತ ಭೂ ಪರಿವರ್ತನೆ:

ಅರಣ್ಯ ಭೂಮಿ ನಾಶಪಡಿಸುವುದರ ಜತೆಗೆ ಕಾಫಿ ತೋಟ, ತೋಟದ ಬೆಳೆಯನ್ನು ನಾಶ ಮಾಡಿ ಕೃಷಿ ಭೂಮಿಯನ್ನು ವಸತಿ ಹಾಗೂ ವಾಣಿಜ್ಯ ಬಳಕೆಗೆ ಪರಿವರ್ತನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲಾಧಿಕಾರಿಗಳ ಕಚೇರಿ ಮಾಹಿತಿ ಪ್ರಕಾರವೇ ಒಂದೇ ದಶಕದಲ್ಲಿ (2005-2015) 2,800 ಎಕರೆ ಜಮೀನನ್ನು ವಸತಿ ಬಡಾವಣೆ, ಹೋಮ್ ಸ್ಟೇ, ರೆಸಾರ್ಟ್ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಿಕೊಡಲಾಗಿದೆ. ಜತೆಗೆ ಭೂ ಪರಿವರ್ತನೆ ಮಾಡದೆಯೂ ನೂರಾರು
ಎಕರೆಯನ್ನು ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿದೆ.

2005 ರಿಂದ 2015 ರ ವೇಳೆಗೆ ಬರೋಬ್ಬರಿ 2,800 ಎಕರೆ ಭೂಮಿ ಅಧಿಕೃತವಾಗಿ ಭೂ ಬಳಕೆ ಪರಿವರ್ತನೆಯಾಗಿದೆ. ಇದರ ಜತೆಗೆ ಎರಡು ದಶಕಗಳಲ್ಲಿ ಬರೋಬ್ಬರಿ 795  ಹೆಕ್ಟೇರ್‌ನಷ್ಟು ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ.
13 ಸಾವಿರ ಎಕರೆ ಅರಣ್ಯ ನಾಶ: ವಾಸ್ತವವಾಗಿ 4102 ಚ.ಕಿ.ಮೀ. ಪಶ್ಚಿಮ ಘಟ್ಟದ ಪ್ರದೇಶವನ್ನು ಆವರಿಸಿಕೊಂಡಿರುವ ಕೊಡಗಿನಲ್ಲಿ ಕಳೆದ 10 ವರ್ಷದಲ್ಲಿ ಕನಿಷ್ಠ 13 ಸಾವಿರ ಎಕರೆ ಅರಣ್ಯ ನಾಶ ಆಗಿದೆ ಎಂದು ಕೃಷಿ ಬೆಲೆ ಆಯೋಗದ
ಅಧ್ಯಕ್ಷ ಪ್ರಕಾಶ್ ಕಮ್ಮರಡಿ ವರದಿ ನೀಡಿದ್ದಾರೆ.

ಹತ್ತು ವರ್ಷದ ಹಿಂದೆ ಕೃಷಿ ಭೂಮಿ 41,291 ಹೆಕ್ಟೇರ್ ಭೂಮಿ ಇತ್ತು. ತೋಟಗಾರಿಕೆ ಭೂಮಿ 1,28,600 ಹೆಕ್ಟೇರ್ ಇತ್ತು. ಈಗ ಕೃಷಿ ಭೂಮಿ 34,814 ಹೆಕ್ಟೇರ್, ತೋಟಗಾರಿಕೆ ಭೂಮಿ 1,40,00 ಹೆಕ್ಟೇರ್ ಆಗಿದೆ. 6,481 ಹೆಕ್ಟೇರ್
ಕೃಷಿ ಕಡಿಮೆ ಆಗಿದೆ. ತೋಟಗಾರಿಕೆಯಲ್ಲಿ 11,371 ಎಕರೆ ಹೆಚ್ಚಾಗಿದೆ. ಕೃಷಿ ಭೂಮಿ ಕಡಿಮೆಯಾಗಿರುವ 6,481 ಹೆಕ್ಟೇರ್ ಭೂ ಪರಿವರ್ತನೆಯಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಎಕರೆ ರೂಪದಲ್ಲಿ ಪರಿಗಣಿಸಿದರೆ 13 ರಿಂದ 15 ಸಾವಿರ ಎಕರೆ ಅರಣ್ಯ ನಾಶವಾಗಿದೆ ಎಂದು ಪ್ರಕಾಶ್ ಕಮ್ಮರಡಿ ಹೇಳುತ್ತಾರೆ.

ಹೆಚ್ಚಿದ ಪ್ರವಾಸಿಗರ ಭಾರ:

ಪ್ರತಿ ವರ್ಷ ಕೊಡಗಿಗೆ ಪ್ರವಾಸಿಗರ ಆಗಮನ ಹೆಚ್ಚುತ್ತಲೇ ಇದೆ. ಪ್ರವಾಸಿಗರ ಸ್ವರ್ಗದಂತಿರುವ ಕೊಡಗಿನಲ್ಲಿರುವ ತಲಕಾವೇರಿ, ಭಾಗಮಂಡಲ, ಅಬ್ಬಿ ಜಲಪಾತ, ದುಬಾರೆ, ಇರ್ಪು ಫಾಲ್ಸ್, ನಾಗರಹೊಳೆ ಅಭಯಾರಣ್ಯ, ಬೈಲುಕುಪ್ಪೆ
ಗೋಲ್ಡನ್ ಟೆಂಪಲ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. 2014 ರಲ್ಲಿ ವಾರ್ಷಿಕ 25 ಲಕ್ಷ ಪ್ರವಾಸಿಗರನ್ನು ಸೆಳೆದಿದ್ದ ಇಲ್ಲಿನ ನಿಸರ್ಗ 2017-18ನೇ ಸಾಲಿನಲ್ಲಿ 30 ಲಕ್ಷದವರೆಗೆ ಪ್ರವಾಸಿಗರನ್ನು ಕರೆಸಿಕೊಂಡಿದೆ. ಕೇರಳದ ಕಣ್ಣೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಕೇವಲ 90 ಕಿ.ಮೀ. ದೂರದಲ್ಲಿರುವ ಕೊಡಗಿಗೆ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ, ರೈಲು ಮಾರ್ಗ ಹಾಗೂ ಅಗತ್ಯ ಮೂಲಸೌಕರ್ಯಕ್ಕಾಗಿ ಅರಣ್ಯ ನಾಶ ನಿರಂತರವಾಗಿ ನಡೆಯುತ್ತಿದೆ. ರೈಲ್ವೇ ಮಾರ್ಗ, ರಸ್ತೆ, ಹೈಟೆನ್ಷನ್ ವಿದ್ಯುತ್ ಮಾರ್ಗ, ನಗರೀಕರಣಕ್ಕಾಗಿ ಮರಗಳ ನಾಶ
ಉಂಟಾಗುತ್ತಿದೆ. ಕೇರಳಕ್ಕೆ ಹೈಟೆನ್ಷನ್ ವಿದ್ಯುತ್ ಮಾರ್ಗ ಕಳುಹಿಸುವ ಯೋಜನೆಗೆ 52 ಸಾವಿರ ಮರಗಳನ್ನು ಆಹುತಿ ಪಡೆಯಲಾಗಿದೆ.

ಪರಿಸರ ಸೂಕ್ಷ್ಮತೆ ಹಾಳು:

ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲು ಅನಧಿಕೃತ ಹೋಂ ಸ್ಟೇ ನಿರ್ಮಾಣ, ರೆಸಾರ್ಟ್ ನಿರ್ಮಾಣಕ್ಕೆ ಕೃತಕ ಗುಡ್ಡಗಳ ನಿರ್ಮಾಣ, ನೈಸರ್ಗಿಕ ಕಾಲುವೆಗಳನ್ನು ಮುಚ್ಚಿ ವಸತಿ ಪ್ರದೇಶಗಳಾಗಿ ಅಭಿವೃದ್ಧಿಪಡಿಸಿರುವುದು ಹಾಗೂ ವೇಗವಾಗಿ
ಆಗಿರುವ ನಗರೀಕರಣವೂ ಸಹ ಪ್ರವಾಹ, ಅನಾಹುತ ಹೆಚ್ಚಾಗಲು ಕಾರಣ ಎಂದು ತಿಳಿದುಬಂದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿ ಪ್ರಭು ಹೇಳುತ್ತಾರೆ. ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೂ ಸಹ ಸಹಕಾರ ನೀಡಿದ್ದಾರೆ. ಹೀಗಾಗಿ ಸಾರ್ವಜನಿಕರಿಗಿಂತಲೂ ಸರ್ಕಾರದ ಪ್ರಮಾದವೇ ಹೆಚ್ಚಿದೆ. 

-ಶ್ರೀಕಾಂತ್ ಎನ್ ಗೌಡಸಂದ್ರ 


 

Follow Us:
Download App:
  • android
  • ios