ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ನಡೆಯುವ ಉಪ ಚುನಾವಣೆಗೆ ತಮ್ಮ ಪಕ್ಷ ಸಿದ್ಧವಿರುವುದಾಗಿ ನಟ ಕಮಲ್ ಹಾಸನ್ ಹೇಳಿದ್ದಾರೆ.

ಚೆನ್ನೈ: ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ತಮಿಳುನಾಡಿನ 20 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತಮ್ಮ ‘ಮಕ್ಕಳ ನೀದಿ ಮಯ್ಯಂ’ ಪಕ್ಷ ಸ್ಪರ್ಧಿಸಲು ಸಿದ್ಧವಿದೆ ಎಂದು ನೂತನ ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ ಹಾಸನ್‌ ಘೋಷಿಸಿದ್ದಾರೆ.

ಬುಧವಾರ ತಮ್ಮ 64ನೇ ಹುಟ್ಟುಹಬ್ಬಂದು ಕಮಲ್‌ ಈ ಘೋಷಣೆ ಮಾಡಿದರು. ‘ತೆರವಾಗಿರುವ ಕ್ಷೇತ್ರಗಳಿಗೆ ಯಾವತ್ತು ಚುನಾವಣೆ ನಡೆಯತ್ತದೆಯೋ ಗೊತ್ತಿಲ್ಲ. ಆದರೆ ಯಾವಾಗ ನಡೆಯಲಿದೆಯೋ ಆಗ ಸ್ಪರ್ಧೆಗೆ ನಮ್ಮ ಪಕ್ಷ ಸಿದ್ಧವಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ನಮ್ಮದು ಕೇವಲ ಭರವಸೆ ನೀಡುವ ಪಕ್ಷವಲ್ಲ. ನಾನು ಜನಾಭಿಪ್ರಾಯ ಸಂಗ್ರಹಕ್ಕೆ ಆದ್ಯತೆ ನೀಡುವೆ’ ಎಂದೂ ಕಮಲ್‌ ನುಡಿದರು.

ಇತ್ತೀಚೆಗೆ ಅಣ್ಣಾಡಿಎಂಕೆಯ 18 ಬಂಡುಕೋರ ಶಾಸಕರ ಅನರ್ಹತೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದಲ್ಲದೆ, ಡಿಎಂಕೆಯ ಎಂ.ಕರುಣಾನಿಧಿ ಹಾಗೂ ಅಣ್ಣಾಡಿಎಂಕೆಯ ಎ.ಕೆ. ಬೋಸ್‌ ಎಂಬುವರ ನಿಧನವಾಗಿತ್ತು. ಹೀಗಾಗಿ 20 ಕ್ಷೇತ್ರಗಳ ಉಪಚುನಾವಣೆಗೆ ತಮಿಳುನಾಡು ಸಜ್ಜಾಗುತ್ತಿದೆ.