ನವದೆಹಲಿ[ಜೂ.13]: ‘ಕಚೇರಿಗೆ ಸರಿಯಾಗಿ 09.30ಕ್ಕೆ ಬರಬೇಕು. ಮನೆಯಿಂದ ಕೆಲಸ ಮಾಡುವುದನ್ನು ಆದಷ್ಟುಕಡಿಮೆ ಮಾಡಿ ಇತರರಿಗೆ ಮಾದರಿಯಾಗಬೇಕು’ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ನೂತನ ಸಚಿವರಾಗಿ ಬೋಧನೆ ಮಾಡಿದ ಪಾಠದ ಸಾರಾಂಶವಿದು.

ತಮ್ಮ ಸಂಪುಟದ ಸಚಿವರ ಜೊತೆ ಬುಧವಾರ ಮೊದಲ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಜ್ಯ ಸಚಿವರ ವೈಖರಿಗೆ ಹೆಚ್ಚಿನ ಒತ್ತು ನೀಡಬೇಕು. ಕ್ಯಾಬಿನೆಟ್‌ ಸಚಿವರಾದವರು ರಾಜ್ಯ ಸಚಿವರ ಜೊತೆಗೆ ಮುಖ್ಯವಾದ ಕಡತಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ಇದರಿಂದ ಉತ್ಪಾದಕತೆ ಹೆಚ್ಚಲಿದೆ. ಅಲ್ಲದೆ, ಕೆಲವು ಪ್ರಸ್ತಾಪನೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಕ್ಯಾಬಿನೆಟ್‌ ಮತ್ತು ಕಿರಿಯ ಸಚಿವರು ಜತೆಗೂಡಿಕೊಂಡು ಚರ್ಚಿಸಬೇಕು’ ಎಂದು ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಚಿವರು ಪಕ್ಷದ ಹಾಗೂ ರಾಜ್ಯದ ಸಂಸದರ ಜೊತೆಗೂ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು. ತಮ್ಮ ಸರ್ಕಾರದ ಅವಧಿಯಲ್ಲಿ ಸಚಿವರು ಹಾಗೂ ಸಂಸದರ ನಡುವೆ ಹೆಚ್ಚು ವ್ಯತ್ಯಾಸವಿರುವುದಿಲ್ಲ ಎಂದು ಮೋದಿ ಅವರು ಇದೇ ವೇಳೆ ಪ್ರತಿಪಾದಿಸಿದರು.