Asianet Suvarna News Asianet Suvarna News

'ಟಾಟಾ ಗ್ರೂಪ್ ಇತಿಹಾಸದಲ್ಲೇ ರತನ್ ಟಾಟಾ ಅತ್ಯಂತ ಭ್ರಷ್ಟರು'

2ಜಿ, ಏರ್ ಏಷ್ಯಾ, ವಿಸ್ತಾರಾ ಪಾಲುದಾರಿಕೆ, ಜಾಗ್ವಾರ್ ಒಪ್ಪಂದ ಮೊದಲಾದ ಹಲವು ಹಗರಣಗಳಲ್ಲಿ ರತನ್ ಟಾಟಾ ಭಾಗಿಯಾಗಿದ್ದಾರೆಂಬುದು ಸುಬ್ರಮಣಿಯನ್ ಸ್ವಾಮಿ ಆರೋಪವಾಗಿದೆ.

ratan tata most corrupt chairman in tata group history says subramanian swamy

ರಾಯಪುರ(ನ. 03): ಸೈರಸ್ ಮಿಸ್ತ್ರಿ ತಲೆದಂಡದ ನಂತರ ಹೊಗೆಯಾಡುತ್ತಿರುವ ಟಾಟಾ ಗ್ರೂಪ್ ವಿವಾದಕ್ಕೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಇನ್ನಷ್ಟು ತುಪ್ಪ ಸುರಿದ್ದಾರೆ. ಟಾಟಾ ಗ್ರೂಪ್ ಇತಿಹಾಸದಲ್ಲೇ ರತನ್ ಟಾಟಾ ಅತ್ಯಂತ ಭ್ರಷ್ಟ ಛೇರ್ಮನ್ ಎಂದು ಸ್ವಾಮಿ ಬಣ್ಣಿಸಿದ್ದಾರೆ. ಸೈರಸ್ ಮಿಸ್ತ್ರಿಯವರಿಗೆ ಅನ್ಯಾಯವಾಗಿದೆ ಎಂದೂ ಸುಬ್ರಮಣಿಯನ್ ಸ್ವಾಮಿ ಸಮರ್ಥನೆ ಮಾಡಿಕೊಂಡಿದ್ದಾರೆ.

"ಟಾಟಾ ಇತಿಹಾಸದಲ್ಲೇ ರತನ್ ಟಾಟಾ ಅತ್ಯಂತ ಭ್ರಷ್ಟ ವ್ಯಕ್ತಿ. ಅವರು ಟಾಟಾ ವಂಶಸ್ಥರೇ ಅಲ್ಲ. ಟಾಟಾ ಅವರ ದತ್ತುಪುತ್ರನ ಮಗನಷ್ಟೇ ಅವರು..." ಎಂದು ಮಾಜಿ ಜನತಾ ಪಕ್ಷದ ಮುಖ್ಯಸ್ಥರು ಟೀಕಿಸಿದ್ದಾರೆ.

"ಸೈರಸ್ ಮಿಸ್ತ್ರಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಟಾಟಾದ ಬೋರ್ಡ್ ಸದಸ್ಯರೆಲ್ಲರೂ ಪ್ರಶಂಸಿಸುತ್ತಿದ್ದರು. ಇದರಿಂದ ರತನ್'ಗೆ ಹೊಟ್ಟೆಯುರಿದು ಮಿಸ್ತ್ರಿಯನ್ನು ಸಂಸ್ಥೆಯಿಂದ ಕಿತ್ತುಹಾಕಿರಬಹುದು" ಎಂದು ಸುಬ್ರಮಣಿಯನ್ ಸ್ವಾಮಿ ಅನುಮಾನಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಸ್ವಾಮಿ, ವಿವಿಧ ಹಗರಣಗಳಿಂದ ಸಿಕ್ಕಿಬೀಳುತ್ತೇನೆಂಬ ಭಯದಿಂದ ರತನ್ ಟಾಟಾ ಇಂಥ ನಿರ್ಧಾರ ಕೈಗೊಂಡಿದ್ದಾರೆ. ಅವರನ್ನು ಕೋರ್ಟ್ ಕಟಕಟೆಗೆ ಎಳೆದರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಈ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಪ್ರಧಾನಿಗೂ ನಾನು ಪತ್ರ ಬರೆದು ಎಲ್ಲ ವಿವರಿಸಿದ್ದೇನೆ" ಎಂದು ಸ್ವಾಮಿ ತಿಳಿಸಿದ್ದಾರೆ. 2ಜಿ, ಏರ್ ಏಷ್ಯಾ, ವಿಸ್ತಾರಾ ಪಾಲುದಾರಿಕೆ, ಜಾಗ್ವಾರ್ ಒಪ್ಪಂದ ಮೊದಲಾದ ಹಲವು ಹಗರಣಗಳಲ್ಲಿ ರತನ್ ಟಾಟಾ ಭಾಗಿಯಾಗಿದ್ದಾರೆಂಬುದು ಸುಬ್ರಮಣಿಯನ್ ಸ್ವಾಮಿ ಆರೋಪವಾಗಿದೆ.

Follow Us:
Download App:
  • android
  • ios