ಕೃಷ್ಣ ಅವರೊಂದಿಗೆ ಯಾರ್ಯಾ‍ಯರು ಪಕ್ಷ ತೊರೆಯಬಹುದು ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ತೀವ್ರವಾಗಿ ನಡೆದಿದೆ. ಪಕ್ಷದಲ್ಲಿ ಅಪಾರ ಬೆಂಬಲಿಗ ಪಡೆ ಹೊಂದಿರುವ ಕೃಷ್ಣ ಅವರು ಸದ್ಯಕ್ಕೆ ದೊಡ್ಡ ತಂಡವನ್ನು ಒಯ್ಯುವ ಮಾನಸಿಕ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ.

ಬೆಂಗಳೂರು(ಮಾ.09): ಕೃಷ್ಣ ಅವರೊಂದಿಗೆ ಯಾರ್ಯಾ‍ಯರು ಪಕ್ಷ ತೊರೆಯಬಹುದು ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ತೀವ್ರವಾಗಿ ನಡೆದಿದೆ. ಪಕ್ಷದಲ್ಲಿ ಅಪಾರ ಬೆಂಬಲಿಗ ಪಡೆ ಹೊಂದಿರುವ ಕೃಷ್ಣ ಅವರು ಸದ್ಯಕ್ಕೆ ದೊಡ್ಡ ತಂಡವನ್ನು ಒಯ್ಯುವ ಮಾನಸಿಕ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಆದಾಗ್ಯೂ ಕೆಲವೊಂದು ಆಪ್ತರು ಅವರೊಂದಿಗೆ ಬಿಜೆಪಿ ಸೇರುವ ಸಾಧ್ಯತೆಯಿದೆ. ಈ ಪೈಕಿ ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ಸಹೋದರನ ಪುತ್ರನಾದ ಗುರುಚರಣ್‌, ತುಮಕೂರಿನ ಮಾಜಿ ಶಾಸಕ ಬೆಳ್ಳಾವಿ ನಾರಾಯಣ ಸೇರಿದಂತೆ ಹಲವರು ಕೃಷ್ಣ ಅವರೊಂದಿಗೆ ಬಿಜೆಪಿ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರ್ಪಡೆ ಹೊಸ್ತಿಲಿನಲ್ಲಿ ನಿಂತಿರುವ ಈ ಹಂತದಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಈ ಬಗ್ಗೆ ಒಂದೂ ಪ್ರತಿಕ್ರಿಯೆ ನೀಡದೆ ರಾಜಕೀಯ ಚಟುವಟಿಕೆಗಳಿಂದ ದೂರವುಳಿದಿರುವುದು ಕಾಂಗ್ರೆಸ್‌ ವಲಯದಲ್ಲಿ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಕೃಷ್ಣ ಅವರ ಬೆನ್ನ ಹಿಂದೆ ಯಾವ್ಯಾವ ನಾಯಕರು ಬಿಜೆಪಿಯತ್ತ ಸಾಗಬಹುದು ಎಂಬ ಚರ್ಚೆಯೂ ಶುರುವಾಗಿದೆ.

ತಮ್ಮ ಸಾಕು ತಂದೆ ಆರ್‌.ಟಿ. ನಾರಾಯಣ್‌ ಅವರ ಆಪ್ತ ಹಾಗೂ ಮಾರ್ಗದರ್ಶಿ ಎಸ್‌.ಎಂ.ಕೃಷ್ಣ ಅವರ ನೇತೃತ್ವದಲ್ಲೇ ರಾಜಕಾರಣಕ್ಕೆ ಕಾಲಿಟ್ಟರಮ್ಯಾ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆದರು. ತಮ್ಮ ಸೆಲೆಬ್ರಿಟಿ ಇಮೇಜ್‌ನಿಂದಾಗಿ ಹೈಕಮಾಂಡ್‌ನಲ್ಲಿ ಶೀಘ್ರವಾಗಿ ಗುರುತಿಸಿಕೊಂಡರು. ಪ್ರಸ್ತುತ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಸೇರಿ ಹೈಕಮಾಂಡ್‌ನ ಪ್ರಭಾವಶಾಲಿ ನಾಯಕರ ಜೊತೆ ನೇರವಾಗಿ ಸಂಪರ್ಕ ಸಾಧಿಸಬಲ್ಲ ರಾಜ್ಯದ ಕೆಲವೇ ಕಾಂಗ್ರೆಸ್ಸಿಗರಲ್ಲಿ ರಮ್ಯಾ ಕೂಡ ಒಬ್ಬರು. ಇಂತಹ ರಮ್ಯಾ ಅವರಿಗೆ ಮಂಡ್ಯ ಕ್ಷೇತ್ರದಲ್ಲಿ ಬೆನ್ನೆಲುಬಾಗಿದ್ದ ಕೃಷ್ಣ ಹಾಗೂ ಅವರ ಬೆಂಬಲಿಗರು ಈಗ ಕಾಂಗ್ರೆಸ್‌ ತ್ಯಜಿಸಲು ಮುಂದಾಗಿರುವುದು ರಮ್ಯಾ ಅವರಿಗೆ ಮಂಡ್ಯ ಕ್ಷೇತ್ರಕ್ಕೆ ಸೀಮಿತವಾದಂತೆ ಹಲವು ಸಮಸ್ಯೆಗಳನ್ನು ಸೃಷ್ಟಿಸಲಿದೆ. ಹೀಗಾಗಿ ಕೃಷ್ಣ ಅವರ ಬಿಜೆಪಿ ಸೇರ್ಪಡೆ ಹಾಗೂ ಅದರಿಂದ ಉಂಟಾಗುವ ಪರಿಸ್ಥಿತಿಯನ್ನು ರಮ್ಯಾ ಅವಲೋಕಿಸುತ್ತಿದ್ದು, ಇದೇ ಕಾರಣಕ್ಕಾಗಿ ರಾಜಕೀಯ ಚಟುವಟಿಕೆಗಳಿಂದ ಸದ್ಯಕ್ಕೆ ದೂರವುಳಿದಿದ್ದಾರೆ ಎನ್ನುತ್ತವೆ ಮೂಲಗಳು.

ವಾಸ್ತವವಾಗಿ ರಮ್ಯಾ ಅವರ ಸಾಕು ತಂದೆ ಆರ್‌.ಟಿ.ನಾರಾಯಣ್‌ ಅವರಿಗೆ ಕೃಷ್ಣ ಅತ್ಯಂತ ಆತ್ಮೀಯರಾಗಿದ್ದರು. ಕೃಷ್ಣ ಅವರನ್ನು ಅಂಕಲ್‌ ಎಂದೇ ಕರೆಯುವ ರಮ್ಯಾ, ಕೃಷ್ಣ ಅವರ ಮಾರ್ಗದರ್ಶನದಲ್ಲೇ ರಾಜಕೀಯ ನಡೆಗಳನ್ನು ಇಟ್ಟವರು. ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ನ ಒಳ ರಾಜಕಾರಣವನ್ನು ಭೇದಿಸಿ ಸಂಸದರಾಗಲು ಈ ಮಾರ್ಗದರ್ಶನವೇ ಅವರಿಗೆ ರಕ್ಷೆಯಾಗಿತ್ತು. ಆದರೆ, ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಕೃಷ್ಣ ಹಾಗೂ ಅಂಬರೀಶ್‌ ಬಣಗಳಾಗಿ ವಿಭಜಿತ ವಾಗಿದ್ದು, ಈ ಪೈಕಿ ಕೃಷ್ಣ ಬಣದೊಂದಿಗೆ ರಮ್ಯಾ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು. ಈ ಬಣದ ನೆರವಿನಿಂದಲೇ ರಮ್ಯಾ ಬಾರಿ ಸಂಸದರಾಗಿಯೂ ಆಯ್ಕೆಗೊಂಡರು. ಅನಂತರ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್‌ ಬಣ ಕಡೇ ಹಂತದಲ್ಲಿ ತಿರುಗಿನಿಂತಿದ್ದರಿಂದ ರಮ್ಯಾ ಸೋಲಬೇಕಾಯಿತು. ಈ 2 ಚುನಾವಣೆಗಳಲ್ಲೂ ರಮ್ಯಾ ಪರವಾಗಿ ಶ್ರಮವಹಿಸಿ ಮಂಡ್ಯದಲ್ಲಿ ಕೆಲಸ ಮಾಡಿದ್ದು ಕೃಷ್ಣ ಬಣ. ಈಗ ಕೃಷ್ಣ ಅವರೇ ಕಾಂಗ್ರೆಸ್‌ ತ್ಯಜಿಸುತ್ತಿರುವುದರಿಂದ ಕೃಷ್ಣ ಬೆಂಬಲಿಗರ ಪಡೆಯ ಪೈಕಿ ಬಹುತೇಕ ಮಂದಿ ಅವರೊಟ್ಟಿಗೆ ಸಾಗುವ ಸಾಧ್ಯತೆಯಿದೆ. ಇದು ರಮ್ಯಾರನ್ನು ಗೊಂದಲಕ್ಕೆ ತಳ್ಳಿದೆ.

ವರದಿ: ಕನ್ನಡ ಪ್ರಭ