ಹಿರಿಯ ಕಾಂಗ್ರೆಸ್ ನಾಯಕ ಸಾದತ್ ಆಲಿ ಖಾನ್ ಅವರ ಮಂಡ್ಯದ ನಿವಾಸವನ್ನು ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯಾ ಖರೀದಿ ಮಾಡಿದ್ದಾರೆ ಎಂಬ ಗುಮಾನಿ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಯಾವುದೇ ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ.
ಮಂಡ್ಯ: ಹಿರಿಯ ಕಾಂಗ್ರೆಸ್ ನಾಯಕ ಸಾದತ್ ಆಲಿ ಖಾನ್ ಅವರ ಮಂಡ್ಯದ ನಿವಾಸವನ್ನು ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯಾ ಖರೀದಿ ಮಾಡಿದ್ದಾರೆ ಎಂಬ ಗುಮಾನಿ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಯಾವುದೇ ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ.
ಮೂಲಗಳ ಪ್ರಕಾರ ವಿದ್ಯಾನಗರದ ಕೆ.ಆರ್. ರಸ್ತೆಯ ಕ್ರೀಡಾಂಗಣದ ಬಲ ಭಾಗದಲ್ಲಿರುವ ತಮ್ಮ ನಿವಾಸವನ್ನು ಸಾದತ್ ಆಲಿ ಖಾನ್ ಕಳೆದ ಮೂರ್ನಾಲ್ಕು ವರ್ಷಗಳಿಂದ ರಮ್ಯಾ ಅವರಿಗೆ ಉಚಿತವಾಗಿ ನಿವಾಸದಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಂತರ ರಮ್ಯಾ 25 ಲಕ್ಷ ರು. ಖರ್ಚು ಮಾಡಿ ಹಳೆಯ ಮನೆಯನ್ನು ನವೀಕರಣಗೊಳಿಸಿ ಗೃಹ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಇದನ್ನು ರಮ್ಯಾ, ಅವರ ಕುಟುಂಬ, ಆಪ್ತ ವಲಯ ಖಚಿತ ಪಡಿಸುತ್ತಿಲ್ಲ. ‘ಸಾದತ್ ಆಲಿ ಖಾನ್ ನಿವಾಸವನ್ನು ಖರೀದಿ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನನ್ನ ಪ್ರಕಾರ ಅಂತಹ ಪ್ರಕ್ರಿಯೆ ನಡೆದಿಲ್ಲ’ ಎಂದು ಖಾನ್ ಅವರ, ಹೆಸರು ಹೇಳಲು ಬಯಸದ ಕುಟುಂಬ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರಮ್ಯಾ ಅವರನ್ನು ಸ್ಪರ್ಧೆಗೆ ಇಳಿಸುವ ಬಗ್ಗೆ ತೀವ್ರ ಚಿಂತನೆ ನಡೆದಿದೆ. ಈ ಕಾರಣಕ್ಕಾಗಿ ತಾವು ನವೀಕರಣಗೊಳಿಸಿದ ಮನೆಯಲ್ಲಿ ವಾಸ್ತವ್ಯ ಹೂಡಿ ರಾಜಕೀಯ ಚಟುವಟಿಕೆ ಆರಂಭಿಸಲು ರಮ್ಯಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಈ ನಡುವೆ ನ.29ರಂದು ರಮ್ಯಾ ಹುಟ್ಟುಹಬ್ಬ. ಆ ದಿನ ಮಂಡ್ಯದಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆಂಬ ಮಾಹಿತಿ ಆಪ್ತ ವಲಯಕ್ಕೆ ನೀಡಿದ್ದಾರೆ ಎನ್ನಲಾಗಿದೆ.
