ಬಿಹಾರ[ಮೇ.24]: ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ ಏಕಾಂಗಿಯಾಗಿ ಬಹುಮತ ಸಾಧಿಸಿ ಸರ್ಕಾರ ರಚಿಸಲು ಸಜ್ಜಾಗಿದೆ. ಹೀಗಿರುವಾಗ ಬಿಜೆಪಿ ಎದುರಾಳಿಯಾಗಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಕುರಿತಾಗಿ ಕುತೂಹಲ ಮಾಹಿತಿ ಬಹಿರಂಗವಾಗುತ್ತಿದೆ. ಇಂತಹವರಲ್ಲಿ ರಾಜಕೀಯ ನಾಯಕ ರಮೇಶ್ ಕುಮಾರ್ ಶರ್ಮಾ ಭಾರೀ ಸುದ್ದಿಯಾಗುತ್ತಿದ್ದಾರೆ.

ಬಿಹಾರದ ಪಾಟಲೀಪುತ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಮೇಶ್ ಕುಮಾರ್ ಶರ್ಮಾ ಹೀನಾಯ ಸೋಲುಂಡಿದ್ದಾರೆ. ಅಚ್ಚರಿ ಮೂಡಿಸುವ ವಿಚಾರವೆಂದರೆ ಈ ಚುನಾವಣೆಯಲ್ಲಿ ಅವರಿಗೆ ಕೇವಲ 1102 ಮತಗಳು ಸಿಕ್ಕಿರುವುದು. ಈ ಬಾರಿ ಲೋಕ ಅಖಾಡಕ್ಕಿಳಿದಿದ್ದ ಶ್ರೀಮಂತ ಅಭ್ಯರ್ಥಿಗಳ ಪೈಕಿ ರಮೇಶ್ ಕುಮಾರ್ ಶರ್ಮಾ ಕೂಡಾ ಒಬ್ಬರು. ದಿನದಾಂತ್ಯಕ್ಕೆ ಅವರು 1558 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಅವರು ಒಟ್ಟು 1107 ಕೋಟಿ ಮೌಲ್ಯದ ಸಂಪತ್ತಿನ ಒಡೆಯ. 

ಪಾಟಲೀಪುತ್ರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ರಮೇಶ್ ಶರ್ಮಾಗೆ ಎದುರಾಳಿಯಾಗಿ ಇದ್ದವರು ಬಿಜೆಪಿಯ ರಾಮ್ ಕೃಪಾಲ್ ಯಾದವ್ ಹಾಗೂ ಆರ್ ಜೆಡಿಯ ಮೀಸಾ ಭಾರತಿ. ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಉದ್ಯಮಿಯಾಗಿರುವ ರಮೇಶ್ ಶರ್ಮಾ, 63 ವರ್ಷಗಳಿಂದ ಹಡಗು ನವೀಕರಣ ಕಂಪೆನಿಯನ್ನು ನಡೆಸುತ್ತಿದ್ದಾರೆ. ಪಾಟಲೀಪುತ್ರದ ನಿವಾಸಿಯಾಗಿರುವ ರಮೇಶ್ ಒಡೆತನದಲ್ಲಿ ಒಟ್ಟು 11 ಕಂಪೆನಿಗಳಿವೆ.