ಬೆಂಗಳೂರು [ಜು.29]:  ಸದ್ಯದ ರಾಜಕೀಯ ಪರಿಸ್ಥಿತಿಯಿಂದ ಮಾನಸಿಕವಾಗಿ ಸಾಕಷ್ಟುನೊಂದಿದ್ದೇನೆ. ನಾಲ್ಕು ದಶಕದ ರಾಜಕೀಯ ಜೀವನದ ಅಂತಿಮ ಘಟ್ಟಕ್ಕೆ ಬಂದಿದ್ದೇನೆ. ನಾಳೆ ವಿಧಾನಸಭೆ ಅಧಿವೇಶನದಲ್ಲಿ ಎಲ್ಲರಿಗೂ ಅಚ್ಚರಿ ಕಾದಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬೆನ್ನಲ್ಲೇ ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರದ ಸದನದಲ್ಲಿ ನಿಮಗೆ ಅಚ್ಚರಿ ಕಾದಿದೆ. ಏನು ಹೇಳಬೇಕು ಎಂದುಕೊಂಡಿದ್ದೇನೆ ಎಂಬುದನ್ನು ಸದನದಲ್ಲೇ ಹೇಳುತ್ತೇನೆ. ನನ್ನ ನಾಲ್ಕು ದಶಕದ ರಾಜಕೀಯ ಜೀವನದ ಅಂತಿಮ ಘಟ್ಟಕ್ಕೆ ಬಂದಿದ್ದೇನೆ. ಸದ್ಯದ ರಾಜಕೀಯದ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಸಾಕಷ್ಟುನೊಂದಿದ್ದೇನೆ. ನಾಳಿನ ಸದನವನ್ನು ನೀವು ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು.

ಕಳೆದ ಗುರುವಾರದ ಸುದ್ದಿಗೋಷ್ಠಿಯಲ್ಲೂ ಸ್ಪೀಕರ್‌ ಸ್ಥಾನದಿಂದ ನಿರ್ಗಮಿಸುವ ಬಗ್ಗೆ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದ ಅವರು, ಹೊಸ ಸರ್ಕಾರ ರಚನೆಯಾದ ಬಳಿಕವೂ ನನ್ನ ಮೇಲೆ ಅವರಿಗೆæ ವಿಶ್ವಾಸ ಇಲ್ಲದಿದ್ದರೆ ಸ್ಪೀಕರ್‌ ಬದಲಾವಣೆಗೆ ಅವಿಶ್ವಾಸ ಮತಕ್ಕೆ ಮನವಿ ಮಾಡಬಹುದು. ನಾನು 15 ದಿನದೊಳಗಾಗಿ ಅವರಿಗೆ ಅವಿಶ್ವಾಸಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಆದರೆ, ಗೌರವದಿಂದ ಬದುಕುವ ನಾನು ಅಲ್ಲಿಯವರೆಗೂ ಕಾಯುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಅಧಿವೇಶನದಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಪ್ರಕಟಿಸಲಿರುವ ಪ್ರಕಟಣೆ ಬಗ್ಗೆ ಕುತೂಹಲ ಮೂಡಿದೆ.