Asianet Suvarna News Asianet Suvarna News

ಹಿರಿಯರ ಮಾತು ಕಡೆಗಣಿಸಿ ಬೇಸ್ತುಬಿದ್ರಾ ಬಿಎಸ್‌ವೈ?

ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿವೆ. ಇದೇ ಹೊತ್ತಿನಲ್ಲಿ ರಾಂನಗರ ಅಭ್ಯರ್ಥಿ ಕಣದಿಂದಲೇ ನಿವೃತ್ತಿಯಾಗಿದ್ದು ಬಿಜೆಪಿಗೆ ಬಿಗ್ ಶಾಕ್ ಆದಂತಾಗಿದೆ.

Ramanagara Candidate retirement Shock For BJP
Author
Bengaluru, First Published Nov 2, 2018, 11:29 AM IST

ಬೆಂಗಳೂರು :  ಮತದಾನಕ್ಕೆ ಕ್ಷಣಗಣನೆ ಆರಂಭವಾದ ಹೊತ್ತಿನಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ದಿಢೀರನೆ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ಸಿಗೆ ವಾಪಸಾಗಿರುವ ಘಟನೆಯಿಂದ ಆಘಾತಕ್ಕೊಳಗಾಗಿರುವ ಬಿಜೆಪಿಗೆ ಚೇತರಿಸಿಕೊಳ್ಳಲು ಸಮಯ ಬೇಕೆ ಬೇಕು ಎನ್ನುವಂತಾಗಿದೆ.

ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಕತ್ತಿ ಮಸೆಯುತ್ತಿದ್ದ ಬಿಜೆಪಿಗೆ ಹಿನ್ನಡೆ ಉಂಟಾಗಿದ್ದು, ಪಕ್ಷದ ಹೈಕಮಾಂಡ್‌ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, ಕೂಲಂಕಷವಾಗಿ ಪರಿಶೀಲಿಸದೆ ಕಾಂಗ್ರೆಸ್‌ನಿಂದ ಎಲ್‌.ಚಂದ್ರಶೇಖರ್‌ ಅವರನ್ನು ಕರೆತಂದು ಟಿಕೆಟ್‌ ನೀಡಿದ್ದರ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ರಾಜ್ಯ ಘಟಕಕ್ಕೆ ಸೂಚಿಸಿದೆ.

ಚಂದ್ರಶೇಖರ್‌ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್‌ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ನಾಲ್ಕು ಮಂದಿ ಮುಖಂಡರು ಮಾತ್ರ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಮತ್ತು ರಾಮನಗರ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌. ಈ ವಿಷಯದಲ್ಲಿ ಯಡಿಯೂರಪ್ಪ ಅವರು ಇತರ ಹಿರಿಯ ನಾಯಕರ ಅಭಿಪ್ರಾಯವನ್ನೂ ಪಡೆದುಕೊಳ್ಳದೆ ಅಶೋಕ್‌, ಯೋಗೇಶ್ವರ್‌ ಮತ್ತು ರುದ್ರೇಶ್‌ ಅವರೊಂದಿಗೆ ಮಾತ್ರ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡಿದ್ದರು.

ಚಂದ್ರಶೇಖರ್‌ ಅವರು ಅಭ್ಯರ್ಥಿಯಾದರೂ ಕೊನೆಯ ಕ್ಷಣದವರೆಗೆ ಕಣದಲ್ಲಿ ಉಳಿದುಕೊಳ್ಳುವ ಬಗ್ಗೆ ಆರಂಭದಲ್ಲೇ ಪಕ್ಷದ ಕೆಲವು ಹಿರಿಯ ಮುಖಂಡರು ಅನುಮಾನ ವ್ಯಕ್ತಪಡಿಸಿ ಸೂಕ್ಷ್ಮವಾಗಿ ಯಡಿಯೂರಪ್ಪ ಮತ್ತವರ ಆಪ್ತರ ಕಿವಿಗೆ ಹಾಕಿದ್ದರು. ಚಂದ್ರಶೇಖರ್‌ ಅವರು ಪಕ್ಷಕ್ಕೆ ಬರಲಿ. ಆದರೆ, ಟಿಕೆಟ್‌ ನೀಡುವುದು ಬೇಡ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನೇ ಗುರುತಿಸಿ ಅಭ್ಯರ್ಥಿಯನ್ನಾಗಿಸುವುದು ಉತ್ತಮ. ಇದರಿಂದ ಪಕ್ಷದ ನೆಲೆ ಗಟ್ಟಿಯಾಗುತ್ತದೆ ಎಂಬ ಸಲಹೆಯನ್ನು ಆ ಹಿರಿಯ ಮುಖಂಡರು ನೀಡಿದ್ದರು. ಅದನ್ನು ನಿರ್ಲಕ್ಷಿಸಿದ್ದೇ ಇವತ್ತು ಬಿಜೆಪಿಗೆ ಮುಖಭಂಗ ಉಂಟಾಗಲು ಕಾರಣವಾಯಿತು.

ಕಾಂಗ್ರೆಸ್ಸಿನ ಹಾಲಿ ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರರೂ ಆಗಿರುವ ಚಂದ್ರಶೇಖರ್‌ ಅವರು ತಮ್ಮ ಪಕ್ಷ ತೊರೆದು ಬಿಜೆಪಿಯಿಂದ ಅಭ್ಯರ್ಥಿಯಾಗುವ ಆಶಯ ವ್ಯಕ್ತಪಡಿಸಿದಾಗಲೇ ಇದು ಸಚಿವ ಡಿ.ಕೆ.ಶಿವಕುಮಾರ್‌ ಅವರ ತಂತ್ರಗಳಲ್ಲಿ ಒಂದಾಗಿರಬಹುದು ಎಂಬ ಅನುಮಾನ ಪಕ್ಷದ ಕೆಲವು ಹಿರಿಯ ಮುಖಂಡರಿಗೆ ಬಂದಿತ್ತು. ಆದರೆ, ಅದನ್ನು ಬಲವಾಗಿ ಪ್ರತಿಪಾದಿಸುವಲ್ಲಿ ಪಕ್ಷದ ಆ ಮುಖಂಡರು ವಿಫಲರಾದರು. ಮೇಲಾಗಿ ಆ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆಯನ್ನೂ ಹೊಂದಿರದೇ ಇದ್ದುದರಿಂದ ಜೆಡಿಎಸ್‌ನ ಮತ ಸೆಳೆಯುವ ವ್ಯಕ್ತಿ ಅಭ್ಯರ್ಥಿಯಾಗುವುದಾದರೆ ಆಗಲಿ ಎಂಬ ಮೌನಕ್ಕೆ ಶರಣಾದರು.

ಆರಂಭದಲ್ಲಿ ಯಡಿಯೂರಪ್ಪ ಅವರು ಮಾಜಿ ಸಚಿವ ಯೋಗೇಶ್ವರ್‌ ಅಥವಾ ಜಿಲ್ಲಾಧ್ಯಕ್ಷ ರುದ್ರೇಶ್‌ ಅವರನ್ನು ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದ್ದರು. ಆದರೆ, ತಮ್ಮ ಚನ್ನಪಟ್ಟಣ ಕ್ಷೇತ್ರ ಬಿಟ್ಟು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ಎಂಬ ಮದಗಜಗಳ ನಡುವೆ ರಾಮನಗರದಲ್ಲಿ ಸಿಲುಕಿಕೊಳ್ಳುವುದು ಬೇಡ ಎಂದು ಯೋಗೇಶ್ವರ್‌ ಹಿಂದೆ ಸರಿದರು. ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದ ರುದ್ರೇಶ್‌ ಕೂಡ ನಿರಾಕರಿಸಿದರು. ಅವರಿಬ್ಬರೂ ಸೇರಿಕೊಂಡು ಚಂದ್ರಶೇಖರ್‌ ಅವರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದು ಆರ್‌.ಅಶೋಕ್‌ ಎಂಬ ಮಾತು ಇದೀಗ ಬಿಜೆಪಿ ಪಾಳೆಯದಿಂದ ಬಲವಾಗಿ ಕೇಳಿಬರುತ್ತಿದೆ.

ಹೇಗಿದ್ದರೂ ಈ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಎಂದು ಅರಿತ ಯಡಿಯೂರಪ್ಪ ಮತ್ತಿತರ ಹಿರಿಯ ನಾಯಕರು ಗೆಲ್ಲುವ ಅವಕಾಶ ಹೆಚ್ಚಿರುವ ಇತರ ಕ್ಷೇತ್ರಗಳತ್ತ ಹೆಚ್ಚು ಗಮನ ಕೇಂದ್ರೀಕರಿಸಿದರು. ಪ್ರಚಾರದ ಉಸ್ತುವಾರಿ ಹೊತ್ತಿದ್ದ ತಂಡದ ನೇತೃತ್ವ ವಹಿಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತಿತರರು ತಮ್ಮ ಪಾಡಿಗೆ ಪ್ರಚಾರ ಕೈಗೊಂಡರೇ ಹೊರತು ಚುನಾವಣೆಯ ಇತರೆ ಖರ್ಚು ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದನ್ನು ಅರಿತ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಚಂದ್ರಶೇಖರ್‌ ಅವರನ್ನು ವಾಪಸ್‌ ಕರೆತರಲು ಪ್ರಯತ್ನ ನಡೆಸಿ ಅಂತಿಮವಾಗಿ ಯಶಸ್ವಿಯಾದರು.

Follow Us:
Download App:
  • android
  • ios