ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಸಿಡಿಸಿದ ಹೊಸ ಬಾಂಬ್
ರಾಮನಗರ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ತಾವು ಚುನಾವಣಾ ಕಣದಿಂದ ಹಿಂದೆ ಸರಿಯಲು ಕಾರಣವೇನು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ರಾಮನಗರ : ರಾಮನಗರ ಉಪಚುನಾವಣೆಯಲ್ಲಿ ಕಮಲ ಅಭ್ಯರ್ಥಿ ಎಲ್.ಚಂದ್ರಶೇಖರ್ ಬಿಜೆಪಿಗೆ ಶಾಕ್ ನೀಡಿದ್ದಾರೆ. ಮೂಲತಹಃ ಕಾಂಗ್ರೆಸ್ನವರಾಗಿದ್ದ ಎಲ್.ಚಂದ್ರಶೇಖರ್ ಇತ್ತೀಚೆಗೆ ಬಿಜೆಪಿಗೆ ಸೇರಿ ರಾಮನಗರದಿಂದ ಅಭ್ಯರ್ಥಿಯಾಗಿದ್ದರು.
ಆದರೆ ಈಗ ಚುನಾವಣೆ ಕೌಂಟ್ ಡೌನ್ ಆರಂಭವಾಗಿದ್ದು, ರಾಮನಗರ ಉಪ ಚುನಾವಣಾ ಕಣದಿಂದ ಚಂದ್ರಶೇಖರ್ ಹಿಂದೆ ಸರಿದಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಜೊತೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದ ಚಂದ್ರಶೇಖರ್, ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ನನ್ನನ್ನ ಸರಿಯಾಗಿ ನೋಡಿಕೊಂಡಿಲ್ಲ. ಎಲ್ಲದಕ್ಕೂ ಕಾರಣ ಸಿ.ಪಿ.ಯೋಗೇಶ್ವರ್. ನಾನು ಬಲಿ ಪಶು ಆಗಿದ್ದೇನೆ. ನನಗೆ ಬಿಜೆಪಿ ಸಹವಾಸವೇ ಬೇಡ ಎಂದು ನನ್ನ ಮಾತೃ ಪಕ್ಷಕ್ಕೆ ಹಿಂದಿರುಗಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಬೆಂಬಲವನ್ನು ಮೈತ್ರಿ ಅಭ್ಯರ್ಥಿಯಾದ ಅನೀತಾ ಕುಮಾರಸ್ವಾಮಿಗೆ ನೀಡುತ್ತೇನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಆತ್ಮಸ್ಥೈರ್ಯ ಕುಂದದಂತೆ ನೋಡಿ ಕೊಂಡ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಈ ರಾಜಕೀಯ ಬೆಳವಣಿಗೆಯಿಂದ ಬಿಜೆಪಿಗೆ ಬಿಗ್ ಶಾಕ್ ಆಗಿದ್ದು, ಡಿಕೆ ಬ್ರದರ್ಸ್ ಗೆಲುವಿನ ನಗೆ ಬಿರಿದ್ದಾರೆ ಎಂದು ಹೇಳಲಾಗುತ್ತಿದೆ.