ನವದೆಹಲಿ(ಜು.21): ಅನಾರೋಗ್ಯದಿಂದ ಬಳಲುತ್ತಿದ್ದ ಲೋಕ ಜನಶಕ್ತಿ ಪಕ್ಷ(ಎಲ್'ಜೆಪಿ) ಮುಖಂಡ, ಸಂಸದ ರಾಮಚಂದ್ರ ಪಾಸ್ವಾನ್  ಅಸುನೀಗಿದ್ದಾರೆ.

ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ರಾಮಚಂದ್ರ ಪಾಸ್ವಾನ್ ನಿಧನ ಹೊಂದಿದ್ದಾರೆ. ಬಿಹಾರದ ಸಮಷ್ಟಿಪುರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ರಾಮಚಂದ್ರ ಪಾಸ್ವಾನ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ.

ಇನ್ನು ರಾಮಚಂದ್ರ ಪಾಸ್ವಾನ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇವರು ರಾಮಚಂದ್ರ ಕುಟುಂಬಕ್ಕೆ ಅವರ ನಿಧನದ ದು:ಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಇನ್ನು ರಾಮಚಂದ್ರ ಪಾಸ್ವಾನ್ ನಿಧನಕ್ಕೆ ಪ್ರಧಾನಿ ಮೋದಿ ಕೂಡ ಸಂತಾಪ ಸೂಚಿಸಿದ್ದು, ಬಿಹಾರದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದ ರಾಮಚಂದ್ರ ಪಾಸ್ವಾನ ಅಗಲಿಕೆ ತಮಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ ಎಂದು ಕಂಬನಿ ಮಿಡಿದಿದ್ದಾರೆ.