ಬಿಜೆಪಿ - ಜೆಡಿಎಸ್‌ ಮಧ್ಯೆ ಭಾರೀ ಕೋಲಾಹಲ ಸೃಷ್ಟಿಸಿದ ವಿಚಾರವೇನು..?

Ram Temple War Between BJP And JDS
Highlights

ಬಿಜೆಪಿ ಹಾಗೂ ಜೆಡಿಎಸ್ ನಡುವೆ ಈ ವಿಚಾರವುಭಾರೀ ಕೋಲಾಹಲವನ್ನೇ ಸೃಷ್ಟಿ ಮಾಡಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಯವರಿಗೆ ರಾಮಮಂದಿರ ನೆನಪಾಗುತ್ತದೆ ಎನ್ನುವ ಮಾತು ಬುಧವಾರ ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೋಲಾಹಕ್ಕೆ ಕಾರಣವಾಯಿತು.

ವಿಧಾನ ಪರಿಷತ್ತು :  ‘ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಯವರಿಗೆ ರಾಮಮಂದಿರ ನೆನಪಾಗುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಈವರೆಗೆ ಸಂಗ್ರಹಿಸಿದ ಹಣ ನಿಮ್ಮ ಜೇಬಿಗೆ ಹೋಯಿತು. ಕೂಡಿಟ್ಟಇಟ್ಟಿಗೆಗಳು ತಿಪ್ಪೆಗೆ ಹೋಗಿವೆ’ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತು ಬುಧವಾರ ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೋಲಾಹಕ್ಕೆ ಕಾರಣವಾಯಿತು.

ಮುಖ್ಯಮಂತ್ರಿಗಳ ಈ ಹೇಳಿಕೆ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದ್ದು, ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಣಿದ ಅವರು, ನನ್ನ ಮಾತಿನಿಂದ ಬಿಜೆಪಿಯವರಿಗೆ ನೋವಾಗಿದ್ದರೆ ವಾಪಸ್‌ ಪಡೆಯುತ್ತೇನೆ ಎಂದು ಹೇಳಿ ವಿವಾದಕ್ಕೆ ಕೊನೆ ಹಾಡಿದರು. ಬಳಿಕ ಬಿಜೆಪಿ ಸದಸ್ಯರು ಪ್ರತಿಭಟನೆ ವಾಪಸ್‌ ಪಡೆದು ತಮ್ಮ ಸ್ಥಾನಗಳಿಗೆ ಮರಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮೇಲ್ಮನೆ ಪ್ರತಿಪಕ್ಷ ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಸರ್ಕಾರ ರಾಜ್ಯಪಾಲರ ಮೂಲಕ ಮಾಡಿಸಿದ ಭಾಷಣ ಸತ್ವ, ಶಕ್ತಿ ಇಲ್ಲದ ಧೂಳು ಹಿಡಿದ ಸರ್ಕಾರಿ ಕಚೇರಿಯ ಪಾಲನಾ ವರದಿಯಂತಿದೆ. ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಅದು 24 ಗಂಟೆಯಲ್ಲಿ ಅಲ್ಲದಿದ್ದರೂ ಗುರುವಾರ ಮಂಡನೆಯಗುವ ಬಜೆಟ್‌ನಲ್ಲಿ ಈಡೇರುತ್ತದೆ ಎಂಬ ವಿಶ್ವಾಸವಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್‌ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುತ್ತಾರಾ? ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುತ್ತಾರಾ ಎಂಬ ಗೊಂದಲ ಜನರಲ್ಲಿದೆ. ಇದನ್ನು ಸ್ಪಷ್ಟಪಡಿಸಬೇಕು ಎಂದು ಎರಡೂ ಪ್ರಣಾಳಿಕೆಗಳ ಕೆಲ ಅಂಶಗಳನ್ನು ಸದನದಲ್ಲಿ ಓದುವ ಮೂಲಕ ಸುದೀರ್ಘವಾಗಿ ಸರ್ಕಾರವನ್ನು ಟೀಕಿಸಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ತೀಕ್ಷ$್ಣವಾಗಿಯೇ ತಿರುಗೇಟು ನೀಡುತ್ತಾ ಹೊರಟ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಇನ್ನೂ ಸರ್ಕಾರ ರಚನೆಯಾಗಿ ಒಂದು ತಿಂಗಳಾಗಿದೆ. ಆಗಲೇ ಎಲ್ಲವೂ ಮುಗಿದು ಹೋಯಿತು ಎನ್ನುವಂತೆ ಪ್ರಣಾಳಿಕೆ ಕೈಲಿ ಹಿಡಿದು ಸರ್ಕಾರ ಅವಧಿ ಪೂರೈಸಿದಾಗ ಮಾಡುವ ಭಾಷಣ ಮಾಡುತ್ತಿದ್ದೀರಲ್ಲಾ? ಹಾಗಾದರೆ, ಕಳೆದ 25 ವರ್ಷಗಳಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿಕೊಂಡು ಬರುತ್ತಿದ್ದೀರಲ್ಲಾ? ಯಾವಾಗ ನಿರ್ಮಾಣ ಮಾಡುತ್ತೀರಿ? ರಾಮಮಂದಿರಕ್ಕೆ ಸಂಗ್ರಹಿಸಿದ ಹಣ ನಿಮ್ಮ ಜೇಬಿಗೆ ಹೋಯಿತು, ಸಂಗ್ರಹಿಸಿದ ಇಟ್ಟಿಗೆಗಳು ತಿಪ್ಪೆಗೆ ಹೋದವು ಎಂದು ಕಟುವಾಗಿ ನುಡಿದರು.

ಇದನ್ನು ಖಂಡಿಸಿ ಬಾವಿಗಿಳಿದ ಬಿಜೆಪಿ ಸದಸ್ಯರು, ಮುಖ್ಯಮಂತ್ರಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಇದು ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಕೂಡಲೇ ರಾಮಮಂದಿರಕ್ಕೆ ಸಂಗ್ರಹಿಸಿದ ಇಟ್ಟಿಗೆಗಳು ತಿಪ್ಪೆಗೆ ಹೋದವು ಎಂಬ ಪದವನ್ನು ವಾಪಸ್‌ ಪಡೆಯಬೇಕು. ಸಂಗ್ರಹಿಸಿದ ಹಣ ಯಾರ ಜೇಬಿಗೆ ಹೋಗಿದೆ ಎಂಬ ಬಗ್ಗೆ ದಾಖಲೆ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪರಿಷತ್‌ನ ಬಿಜೆಪಿ ನಾಯಕ ಶ್ರೀನಿವಾಸ ಪೂಜಾರಿ ಅವರು, ರಾಮಮಂದಿರ ನಿರ್ಮಾಣದ ಅಜೆಂಡಾ ಇಂದಿಗೂ ಬಿಜೆಪಿಯಲ್ಲಿದೆ. ನಾವು ಅದರಿಂದ ಹಿಂದೆ ಸರಿದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಎಷ್ಟುದಿನ ಬೇಕು ರಾಮಮಂದಿರ ನಿರ್ಮಾಣ ಮಾಡೋಕೆ? ಹಾಗಾದರೆ ನೀವು ರಾಮಮಂದಿರ ಹೆಸರಲ್ಲಿ ಹಣ ವಸೂಲಿ ಮಾಡಿಲ್ಲವಾ? ಇಟ್ಟಿಗೆ ಕ್ರೋಢೀಕರಿಸಿಲ್ಲವಾ? ಯಾರಿಗೆ ಲೆಕ್ಕ ಕೊಟ್ಟಿದ್ದೀರಿ ಹೇಳಿ, ಆ ಹಣ ಎಲ್ಲೋಯ್ತು ಹೇಳಿ? ರಾಮಮಂದಿರ ನಿರ್ಮಾಣಕ್ಕೆ ಇನ್ನೆಷ್ಟುದಿನ ಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌, ರಾಮಮಂದಿರಕ್ಕೆ ನೀವು ಹಣ ಕೊಟ್ಟಿದ್ದೀರಾ ಹೇಳಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಬೋಜೇಗೌಡ ನಾನು ಹಣ ಕೊಟ್ಟಿದ್ದೇನೆ. ನಮ್ಮ ಮನೆಗೆ ಬಂದು ಹಣ ತೆಗೆದುಕೊಂಡು ಹೋಗಿದ್ದೀರಿ ಎಂದು ಆರೋಪಿಸಿದರು.

ಆಗ ಮಧ್ಯಪ್ರವೇಶಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನನ್ನ ಹೇಳಿಕೆಯಿಂದ ಬಿಜೆಪಿಯವರಿಗೆ ನೋವಾಗಿದ್ದರೆ ವಾಪಸ್‌ ಪಡೆಯುತ್ತೇನೆ. ರಾಮಮಂದಿರಕ್ಕೆ ಸಂಗ್ರಹಿಸಿದ ಹಣವನ್ನು ಬಿಜೆಪಿಯವರು ವ್ಯರ್ಥ ಮಾಡಿಲ್ಲ. ಎಲ್ಲೋ ಮಡಗಿದ್ದಾರೆ. ಇಟ್ಟಿಗೆಗಳನ್ನು ತಿಪ್ಪೆಗೆ ಎಸೆದಿಲ್ಲ, ಒಂದೆಡೆ ಇಟ್ಟಿದ್ದಾರೆ. ಇನ್ನು 20 ವರ್ಷ ನಂತರ ಮಂದಿರಕ್ಕೆ ಗುದ್ದಲಿ ಪೂಜೆ ಮಾಡುತ್ತಾರೆ. ರಾಮ ಅವರಿಗೆ ಒಳ್ಳೆಯದು ಮಾಡಲಿ ಎಂದರು. ಬಳಿಕ ಬಿಜೆಪಿ ಸದಸ್ಯರು ಪ್ರತಿಭಟನೆ ವಾಪಸ್‌ ಪಡೆದರು.

loader