ಅಯೋಧ್ಯೆಯಲ್ಲಿ ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) ನಾಯಕರು ತಮ್ಮ ಪರವಾಗಿಯೇ ತೀರ್ಪು ಬರಲಿದೆ ಎಂಬ ಅತೀವ ವಿಶ್ವಾಸದೊಂದಿಗೆ ದೇಗುಲ ನಿರ್ಮಾಣಕ್ಕೆ ಸಿದ್ಧತೆ ತೀವ್ರಗೊಳಿಸಿದ್ದಾರೆ. 

ಅಯೋಧ್ಯೆ: ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಕುರಿತಂತೆ ಅ.29ರಿಂದ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲು ಸಜ್ಜಾಗಿದ್ದರೆ, ಇತ್ತ ಅಯೋಧ್ಯೆಯಲ್ಲಿ ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) ನಾಯಕರು ತಮ್ಮ ಪರವಾಗಿಯೇ ತೀರ್ಪು ಬರಲಿದೆ ಎಂಬ ಅತೀವ ವಿಶ್ವಾಸದೊಂದಿಗೆ ದೇಗುಲ ನಿರ್ಮಾಣಕ್ಕೆ ಸಿದ್ಧತೆ ತೀವ್ರಗೊಳಿಸಿದ್ದಾರೆ.

ರಾಮಮಂದಿರಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡುತ್ತಿದ್ದಂತೆ ಭವ್ಯ ದೇಗುಲವನ್ನು ಎದ್ದು ನಿಲ್ಲಿಸುವ ಉದ್ದೇಶದಿಂದ ವಿಎಚ್‌ಪಿ ನಾಯಕರು ಹಲವಾರು ಟ್ರಕ್‌ಗಳಲ್ಲಿ ಕಲ್ಲು ತರಿಸಲು ಉದ್ದೇಶಿಸಿದ್ದಾರೆ. ಶೀಘ್ರದಲ್ಲೇ 70 ಲಾರಿಗಳಲ್ಲಿ ಕಲ್ಲುಗಳು ಅಯೋಧ್ಯೆಯನ್ನು ತಲುಪಲಿವೆ. ಇದರ ಜತೆಗೆ ಕಲ್ಲು ಕೆತ್ತನೆ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯ ಕುಶಲಕರ್ಮಿಗಳನ್ನು ನಿಯೋಜನೆ ಮಾಡಲಾಗಿದೆ.

ಕಂಬಗಳ ಕೆತ್ತನೆ ಕೆಲಸವನ್ನು ಮುಗಿಸಿದರೆ, ನ್ಯಾಯಾಲಯದಲ್ಲಿ ತೀರ್ಪು ಹೊರಬೀಳುತ್ತಿದ್ದಂತೆ ಮೂರು ಅಂತಸ್ತಿನ ಸುಂದರ ದೇಗುಲವನ್ನು ಬೇಗನೆ ನಿರ್ಮಾಣ ಮಾಡಬಹುದು ಎಂಬುದು ವಿಎಚ್‌ಪಿ ನಾಯಕರ ಆಲೋಚನೆ.

ಕಳೆದ ವರ್ಷ ತರಿಸಲಾಗಿದ್ದ ಕಲ್ಲುಗಳಿಗೆ ಹೋಲಿಸಿದರೆ ಈ ವರ್ಷ ವಿಎಚ್‌ಪಿ ನಾಯಕರು ತರಿಸುತ್ತಿರುವ ಕಲ್ಲಿನ ಪ್ರಮಾಣ ನಾಲ್ಕು ಪಟ್ಟು ಅಧಿಕವಾಗಿದೆ. ಅಯೋಧ್ಯೆಯಲ್ಲಿರುವ ಕರಸೇವಕಪುರದಲ್ಲಿರುವ ರಾಮಮಂದಿರ ನಿರ್ಮಾಣ ಕಾರ್ಯಶಾಲೆಯಲ್ಲಿ ವಿಎಚ್‌ಪಿ ಹಾಗೂ ರಾಮಜನ್ಮಭೂಮಿ ನ್ಯಾಸದ ಮುಖಂಡರ ಉಸ್ತುವಾರಿಯಲ್ಲಿ ಕೆಲಸಗಳು ನಡೆಯುತ್ತಿವೆ.